ಕುಂಬಳೆ: ತ್ರಿಸ್ತರ ಪಂಚಾಯತ್‌ಗಳಿಗೆ ಸ್ಪರ್ಧಿಸುವ ಭಾಷಾ ಅಲ್ಪಸಂಖ್ಯಾತರಾದ ಅಭ್ಯರ್ಥಿಗಳೊಂದಿಗೆ ತಾರತಮ್ಯ ನೀತಿ ತೋರಿಸುತ್ತಿರುವುದಾಗಿ ಕುಂಬಳೆಯ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ಕನ್ನಡ ಭಾಷೆ ತಿಳಿದಿರುವ ಅಭ್ಯರ್ಥಿಗಳು ಮಲೆಯಾಳದಲ್ಲಿರುವ ನಾಮಪತ್ರಿಕೆಯ ಸತ್ಯಪ್ರತಿಜ್ಞೆಯನ್ನು ಹೇಗೆ ಹೇಳುವುದೆಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದರು. ಈ ಬಗ್ಗೆ ಹಲವು ಕಡೆಗಳಲ್ಲಿ ವಾಗ್ವಾದಗಳು ಉಂಟಾಗಿವೆ. ಜಿಲ್ಲಾ ಪಂಚಾಯತ್‌ಗೆ ನಾಮಪತ್ರ ಸಲ್ಲಿಸಿದ ಕೇಶವ ನಾಯ್ಕ್ ಮಲಯಾಳ ತಿಳಿದಿಲ್ಲವೆಂದು ತಿಳಿಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕನ್ನಡದಲ್ಲಿರುವ ಪ್ರಮಾಣವಚನ ಪ್ರತಿಯನ್ನು ನೀಡಿದ್ದಾರೆ. ದೇವರ ಹೆಸರಿಗೆ ಬದಲಾಗಿ ಪ್ರಕೃತಿಯನ್ನು ಸಾಕ್ಷಿ ಮಾಡಿಕೊಂಡು ಪ್ರಮಾಣವಚನ ಮಾಡಲಿರುವ ಯತ್ನವನ್ನು ಜಿಲ್ಲಾಧಿಕಾರಿ ತಡೆದಿರುವುದಾಗಿಯೂ ಕೇಶವ ನಾಯ್ಕ್ ಆರೋಪಿಸಿದರು.
ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿರುವ ನೂರಾರು ಕನ್ನಡ ಭಾಷಾ ಅಲ್ಪಸಂಖ್ಯಾತರು ಚುನಾವಣಾ ಕಾರ್ಯಗಳಲ್ಲಿ ಬಹಳ ಸಮಸ್ಯೆಯನ್ನು ಎದುರಿಸಿದ್ದಾರೆ. ಆದುದರಿಂದ ಮುಂದೆ ಬರಲಿರುವ ಚುನಾವಣೆಗಳಲ್ಲಿ ನಾಮಪತ್ರ ಸಹಿತದ ಎಲ್ಲಾ ದಾಖಲೆಗಳನ್ನು ಕನ್ನಡದಲ್ಲಿ ಲಭ್ಯಗೊಳಿಸಬೇಕೆಂದು ಕೇಶವ ನಾಯ್ಕ್ ಆಗ್ರಹಿಸಿದರು. ಭ್ರಷ್ಟಾಚಾರ ವಿರುದ್ಧ, ಪರಿಸರ ಸಂರಕ್ಷಣೆ ಮುಂದಿಟ್ಟು ಗ್ರಾಮ, ಬ್ಲೋಕ್, ಜಿಲ್ಲಾ ಪಂಚಾಯತ್‌ಗಳಿಗೆ ಸ್ಪರ್ಧಿಸುವುದಾಗಿ ಅವರು ತಿಳಿಸಿದರು. ಶ್ರೀಧರ ಶಿರಿಯ ಜೊತೆಗಿದ್ದರು.







