ಮಂಡಲ ಅಧ್ಯಕ್ಷರ ವರ್ತನೆಯಿಂದ ಬೇಸತ್ತು ಬದಿಯಡ್ಕ ಪಂಚಾಯತ್ ಮುಸ್ಲಿಂ ಲೀಗ್ ಉಪಾಧ್ಯಕ್ಷ ರಾಜೀನಾಮೆ

ಬದಿಯಡ್ಕ: ಬದಿಯಡ್ಕ ಪಂಚಾಯತ್ ಮುಸ್ಲಿಂ ಲೀಗ್‌ನ ಸರ್ವಾಧಿಕಾರಕ್ಕೆ ಮನನೊಂದು ಹಾಗೂ ಮಂಡಲ ಅಧ್ಯಕ್ಷ ಮಾಹಿನ್ ಕೇಳೋಟ್‌ರ ವರ್ತನೆಯಿಂದ ಬೇಸತ್ತು ಮುಸ್ಲಿಂ ಲೀಗ್ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ  ಅಬ್ದುಲ್ ಹಮೀದ್ ಪಳ್ಳತ್ತಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಡಲ ಅಧ್ಯಕ್ಷ ತನ್ನ ಆಸಕ್ತಿಗೆ ಅನುಸಾರವಾಗಿ ಕಾರ್ಯಾಚರಿಸುತ್ತಿದ್ದು, ಕಾರ್ಯಕರ್ತರು ಪಕ್ಷದಿಂದ ದೂರ ಉಳಿಯುತ್ತಿದ್ದಾರೆ. ತನ್ನ ಸ್ವಂತ ಲಾಭಕ್ಕಾಗಿ ಮಂಡಲ ಅಧ್ಯಕ್ಷ ಪಕ್ಷವನ್ನು ದುರುಪಯೋಗ ಮಾಡುತ್ತಿರುವುದಾಗಿ ಅಬ್ದುಲ್ ಹಮೀದ್ ದೂರಿದ್ದಾರೆ. ಹಳೆಯ 7ನೇ ವಾರ್ಡ್‌ನಿಂದ ಎರಡು ಬಾರಿ ಜಯ ಗಳಿಸಿ ಆ ವಾರ್ಡನ್ನು ಯಾರಿಗೂ ತಿಳಿಸದೆ ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಪಂಚಾಯತ್ ಪದಾಧಿಕಾರಿಗಳ ಸಭೆ ಕೂಡಾ ಕರೆಯದೆ ಸ್ವಂತ ತೀರ್ಮಾನ ಕೈಗೊಳ್ಳಲಾಗಿದೆ.

ಸೀತಾಂಗೋಳಿ ವಾರ್ಡ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸೀತಾಂಗೋಳಿ ಭಾಗದ ಕಾರ್ಯಕರ್ತರಲ್ಲಿ ತಪ್ಪು ಭಾವನೆ ಮೂಡಿಸಿ ಆ ವಾರ್ಡ್‌ನ ಅಭ್ಯರ್ಥಿಯಾಗಿ ಸ್ವಯಂ ಘೋಷಿಸಿಕೊಂಡಿದ್ದಾರೆ. 12 ವರ್ಷ ಪ್ರಾಯದಲ್ಲಿ ತನ್ನ ತಂದೆ ದಿ| ಹಾಜಿ ಬಿ.ಕೆ. ಫಸಲ್ ಹಾಜಿಯವರ ಕೈಯಿಂದ ಎಂಎಸ್‌ಎಫ್‌ನ ಸದಸ್ಯತನ ಪಡೆದು 50 ವರ್ಷದಷ್ಟು ಕಾಲ ಲೀಗ್‌ನಲ್ಲಿ ದುಡಿದ ವ್ಯಕ್ತಿಯಾಗಿದ್ದೇನೆ ನಾನು. ಹಳೆಯ ಲೀಗ್ ಕಾರ್ಯಕರ್ತರಲ್ಲಿ ಹಿರಿಯ ವ್ಯಕ್ತಿ ಎಂಬ ಪರಿಗಣನೆ ಕೂಡಾ ನನಗೆ ನೀಡದೆ ಸ್ವಂತ ಇಷ್ಟ ಪ್ರಕಾರ ನನ್ನ ವಾರ್ಡ್‌ನ ಕಾರ್ಯಗಳಲ್ಲಿ ಮಧ್ಯ ಪ್ರವೇಶಿಸುವುದು, ನನ್ನನ್ನು ಮೂಲೆಗುಂಪು ಮಾಡಲು ಪಕ್ಷವನ್ನು ಬಲಿ ನೀಡುತ್ತಿರುವುದು ಮಂಡಲ ಅಧ್ಯಕ್ಷರ ಹವ್ಯಾಸವಾಗಿ ಹೋಗಿದೆ ಎಂದು ಅಬ್ದುಲ್ ಹಮೀದ್ ದೂರಿದ್ದಾರೆ.

ತನ್ನ ಇಷ್ಟದವರಿಗೆ ಪಕ್ಷದ ಸ್ಥಾನಗಳನ್ನು ನೀಡುತ್ತಿದ್ದು, ಹಲವು ಕಾರ್ಯಕರ್ತರು ಪಕ್ಷದಿಂದ ದೂರ ಉಳಿಯುತ್ತಿದ್ದಾರೆ. ಇದರಿಂದಾಗಿ  ಬದಿಯಡ್ಕ ಪಂಚಾಯತ್‌ನಲ್ಲಿ ಮುಸ್ಲಿಂ ಲೀಗ್‌ಗೆ ಹಿಂದಿನಷ್ಟು ಹೋರಾಟ ಸ್ಥೈರ್ಯ ಈಗ ಇಲ್ಲ. ಈ ಸ್ಥಿತಿ ಮುಂದುವರಿದರೆ ಮುಂದಿನ ಚುನಾವಣೆ ಎದುರಿಸಲು ಪಕ್ಷಕ್ಕೆ ಸಾಮರ್ಥ್ಯ ಇದೆಯೋ ಎಂಬ ಬಗ್ಗೆ ಸಂಶಯವಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದು, ಮುಸ್ಲಿಂ ಲೀಗ್‌ನ ಪಂ. ಸಮಿತಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದೇನೆಂದು ಪ್ರಕಟಣೆಯಲ್ಲಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.

RELATED NEWS

You cannot copy contents of this page