ಕಾಸರಗೋಡು: ಕೊಲೆಯತ್ನ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (3)ರ ನ್ಯಾಯಧೀಶರಾದ ಅಚಿಂತ್ಯಾ ರಾಜ್ ಉಣ್ಣಿ ಏಳು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮೂಲತಃ ಕರ್ನಾಟಕ ಶಿವಮೊಗ್ಗ ರಾಜೀವ್‌ನಗರ ನಿವಾಸಿ ಹಾಗೂ ಈಗ ಉಪ್ಪಳ ಅಂಚೆ ಕಚೇರಿ ಬಳಿ ವಾಸಿಸುತ್ತಿರುವ ವಿಜಯ ನಾಯ್ಕ (50) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಉಪ್ಪಳ ಅಂಚೆ ಕಚೇರಿ ಬಳಿಯ ನಾಗರಾಜ್ ನಾಯ್ಕ ಎಂಬವರಿಗೆ ನೀಡಿದ್ದ ಮರ ತುಂಡರಿಸುವ ಯಂತ್ರವನ್ನು ೨೦೧೯ರಂದು ಆರೋಪಿ ಹಿಂತಿರುಗಿ ಕೇಳಿದ್ದನೆಂದೂ ಅದನ್ನು ನಾಗರಾಜ್ ನಾಯ್ಕ ನೀಡಲು ತಯಾರಾಗದಿದ್ದಾಗ ಅದರ ಹೆಸರಲ್ಲಿ ಅವರಿಬ್ಬರ ಮಧ್ಯೆ ಜಗಳ ಉಂಟಾಗಿದ್ದು ಈ ವೇಳೆ ನಾಗರಾಜ್ ನಾಯ್ಕರ ತಲೆಗೆ ಕಗ್ಗಲ್ಲಿನಿಂದ ಹೊಡೆದು ಗಂಭೀರ ಗಾಯಗೊಳಿಸಿದ ಆರೋಪದಂತೆ ಮಂಜೇಶ್ವರ ಪೊಲೀಸರು ಆರೋಪಿ ವಿಜಯ್ ನಾಯ್ಕನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂ ಡಿದ್ದರು. ಅಂದು ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ಪಿ.ಕೆ. ಧನಂಜಯನ್ ಈ ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಸಿದ್ದರು. ನಂತರ ಇನ್‌ಸ್ಪೆಕ್ಟರ್ ಎ.ವಿ. ದಿನೇಶ್ ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಜಿಲ್ಲಾ ಸರಕಾರಿ ಪ್ಲೀಡರ್ ಪಿ.ಸತೀಶನ್ ಮತ್ತು ಕೆ.ಎಂ. ಅಂಬಿಳಿ ನ್ಯಾಯಾಲಯದಲ್ಲಿ ವಾದಿಸಿದ್ದರು.






