ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ-ಸಣ್ಣಿ ಜೋಸೆಫ್

ಕಾಸರಗೋಡು: ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸಲು ಇಲ್ಲಿನ ಎಡ ರಂಗ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಸಣ್ಣಿ ಜೋಸೆಫ್ ಆರೋಪಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಂಗವಾಗಿ ಕಾಸರಗೋಡು ಪ್ರೆಸ್ ಕ್ಲಬ್ ಇಂದು ಬೆಳಿಗ್ಗೆ ಹಮ್ಮಿಕೊಂಡ ‘ಮೀಟ್‌ದ ಪ್ರೆಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಎಲ್ಲಾ ವಲಯಗಳು ಸ್ತಬ್ದಗೊಂಡಿದೆ. ಕೃಷಿ ವಲಯ ನಾಶದತ್ತ ಸಾಗಿದೆ.  ವನ್ಯ ಮೃಗಗಳ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಎಕ್ರೆಗಟ್ಟಲೆ ಕೃಷಿ  ನಾಶಗೊಂಡಿದ್ದರೂ  ವನ್ಯ ಮೃಗಗಳ ಹಾವಳಿ ತಡೆಗಟ್ಟುವಲ್ಲಿ  ಸರಕಾರ ವಿಫಲಗೊಂಡಿದೆಯೆಂದೂ ಸಣ್ಣಿ ಜೋಸೆಫ್ ಆರೋಪಿಸಿದ್ದಾರೆ. ರಾಜ್ಯದ ವಿದ್ಯಾವಂತರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪಿಎಸ್‌ಸಿ ಪರೀಕ್ಷೆ ನಡೆಸಿ ರ‍್ಯಾಂಕ್ ಪಟ್ಟಿ ಪ್ರಕಟಿಸುತ್ತಿದ್ದರೂ ನೇಮಕಾತಿಗೆ  ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಭಾರತದಲ್ಲಿ ಅತೀ ಹೆಚ್ಚು ನಿರುದ್ಯೋಗಿಗಳಿರುವ ರಾಜ್ಯವಾಗಿ ಕೇರಳ ಬದಲಾಗಿದೆ. ಆರೋಗ್ಯ ವಲಯವೂ ಪೂರ್ಣ ಸ್ತಬ್ಧಗೊಂಡಿದೆ. ಜನಸಾಮಾನ್ಯರಿಗೆ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ಆರೋಗ್ಯ ಇಲಾಖೆ ವಿಫಲಗೊಂಡಿದೆ.  ಕಾಸರ ಗೋಡು ಮೆಡಿಕಲ್ ಕಾಲೇಜಿನಲ್ಲಿ ಅಗತ್ಯದ ನೇಮಕಾತಿ ನಡೆಸಲು  ಸರಕಾರ  ಕ್ರಮ ಕೈಗೊಂಡಿಲ್ಲ. ಇದರಿಂದ ಸೂಕ್ತ ಚಿಕಿತ್ಸೆಗಾಗಿ ಕಾಸರಗೋಡಿನ ಜನರು ಕರ್ನಾಟಕ ಅಥವಾ ಬೇರೆಡೆಗೆ ತೆರಳಬೇ ಕಾದ ಸ್ಥಿತಿ ಉಂಟಾಗಿದೆಯೆಂದು  ಸಣ್ಣಿ ಜೋಸೆಫ್ ಆರೋಪಿಸಿದ್ದಾರೆ.

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಉಪಸ್ಥಿತರಿದ್ದರು.

You cannot copy contents of this page