ಕಾಸರಗೋಡು: ಜಿಲ್ಲೆಯ ರಸ್ತೆಗಳ ಹಾಗೂ ಮೇಲ್ಸೇತುವೆಗಳ ಕಾಮಗಾ ರಿಗಳನ್ನು ಶೀಘ್ರವೇ ಪೂರ್ತಿಗೊಳಿಸಿ ಸಂಚಾರ ಯೋಗ್ಯಗೊಳಿಸಬೇಕೆಂದು, ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರು ಎಸ್ಎಸ್ಎಲ್ಸಿ, ಪ್ಲಸ್ಟು ವಿದ್ಯಾರ್ಥಿಗಳ ಫೊಟೋಗಳನ್ನು ತೆಗೆಯುವುದನ್ನು ನಿಷೇಧಿಸಬೇಕೆಂದು ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಮಲೆನಾಡು ವಲಯದಲ್ಲಿ ಕೃಷಿಕರಿಗೆ ಜೀವಹಾನಿ ಬೆದರಿಕೆ ಒಡ್ಡುವ ಕಾಡುಮೃಗಗಳ ಆಕ್ರಮಣದಿಂದ ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಠರಾವು ಮೂಲಕ ಸಮ್ಮೇಳನ ಆಗ್ರಹಿಸಿದೆ.
ಕಾಞಂಗಾಡ್ ವ್ಯಾಪಾರ ಭವನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನದಲ್ಲಿ ನಿನ್ನೆ ಪ್ರತಿನಿಧಿ ಸಮ್ಮೇಳನ ನಡೆಯಿತು. ರಾಜ್ಯ ಕೋಶಾಧಿಕಾರಿ ಉಣ್ಣಿ ಕೂವೋಡ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಸುಗುಣನ್ ಇರಿಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಿಆರ್ಒ ರಾಜೀವನ್ ರಾಜಪುರಂ ಸಂತಾಪ ಠರಾವು, ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಸಂಘಟನಾ ವರದಿ ಮಂಡಿಸಿದರು. ಜಿಲ್ಲಾ ವರದಿಯನ್ನು ಕಾರ್ಯದರ್ಶಿ ವಿ.ಎನ್. ರಾಜೇಂದ್ರನ್, ಲೆಕ್ಕಪತ್ರವನ್ನು ಕೋಶಾಧಿಕಾರಿ ಎನ್.ಕೆ. ಪ್ರಜಿತ್ ಮಂಡಿಸಿದರು. ಹಲವರು ಭಾಗವಹಿಸಿದರು. ನೂತನ ಪದಾಧಿಕಾರಿಗಳಾಗಿ ಟಿ.ವಿ. ಸುಗುಣನ್ ಇರಿಯ (ಅಧ್ಯಕ್ಷ), ಎನ್.ಕೆ. ಪ್ರಜಿತ್ (ಕಾರ್ಯದರ್ಶಿ), ಕೆ. ಸುಧೀರ್ (ಕೋಶಾಧಿಕಾರಿ), ರಂಜಿ ಐ, ಸುರೇಶ್ ಆಚಾರ್ಯ (ಉಪಾಧ್ಯಕ್ಷರು), ಅನಿಲ್, ಮನು (ಜೊತೆ ಕಾರ್ಯದರ್ಶಿಗಳು), ರಾಜೀವನ್ ರಾಜಪುರ (ಪಿಆರ್ಒ) ಆಯ್ಕೆಯಾದರು.







