ಕುಂಬಳೆ: ಆರಿಕ್ಕಾಡಿ ಕಡವತ್‌ನಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದೆ. ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಆಸಿಫ್ (30) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಮುಂಜಾನೆ 5 ಗಂಟೆ ವೇಳೆ ಇವರ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಆಸಿಫ್ ಮೀನು ಕಾರ್ಮಿಕನಾಗಿದ್ದರು. ಮೀನುಗಾರಿಕೆ ಬಳಿಕ ಮನೆಗೆ ಮರಳುತ್ತಿದ್ದ ವೇಳೆ ಇವರಿಗೆ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ತಲೆಗೆ ಉಂಟಾದ ಗಂಭೀರ ಗಾಯದಿಂದ ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇದರಿಂದ ಕುಂಬಳೆ ಪೊಲೀಸರು ಮೃತ ವ್ಯಕ್ತಿಯ ಕೈಯ ಬೆರಳಚ್ಚು ಸಂಗ್ರಹಿಸಿ ಡಾಟಾ ಬ್ಯಾಂಕ್ ಮೂಲಕ ಪರಿಶೀಲಿಸಿದಾಗ ಆಸಿಫ್ ಎಂದು ದೃಢೀಕರಿಸಲಾಗಿದೆ.
ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್.ಐ ಪ್ರದೀಪ್ ಕುಮಾರ್, ಪ್ರೊಬೆಶನರಿ ಎಸ್‌ಐ ಅನಂತಕೃಷ್ಣನ್ ಎಂಬಿವರು ನಡೆಸಿದ ಸಮಯೋಚಿತ ಕ್ರಮದಿಂದ ಮೃತ ವ್ಯಕ್ತಿಯ ಗುರುತು ಹಚ್ಚಲು ಸಾಧ್ಯವಾಯಿತು.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಇಂದು ಬೆಳಿಗ್ಗೆ ಮನೆಗೆ ತಲುಪಿಸಲಾ ಯಿತು. ನಂತರ ಕೊಯಿಪ್ಪಾಡಿ ಕಡಪ್ಪುರ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ದಿ| ಅಬ್ದುಲ್ ಖಾದರ್-ಫಾತಿಮ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿ ಯರಾದ ಅರ್ಶಾದ್, ಕೆ.ಟಿ. ಹನೀಫ, ಅನೀಸ, ರಹಿಯಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






