ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಮಾದಕದ್ರವ್ಯವಾದ 28.32 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ಮುಳಿಯಾರು ಮಾಸ್ತಿಕುಂಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕೆ. ಉಸ್ಮಾನ್ ಯಾನೆ ಚಾರ್ಲಿ ಉಸ್ಮಾನ್ (43), ಮಧೂರು ಶಿರಿಬಾಗಿಲು ಬದರ್ ಜುಮಾ ಮಸೀದಿ ಸಮೀಪದ ಕುಳತ್ತಿಂಗರ ಹೌಸ್‌ನ ಎಂ. ಅಬ್ದುಲ್ ರಹ್ಮಾನ್ (55) ಎಂಬಿವರನ್ನು ಕಾಸರಗೋಡು ನಗರಠಾಣೆ ಎಸ್.ಐ. ಕೆ. ರಾಜೀವನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ನಿನ್ನೆ ಸಂಜೆ ಶಿರಿಬಾಗಿಲಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೆರಿಯಡ್ಕ ಭಾಗದಿಂದ ಬಂದ ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ರಿಕ್ಷಾ ನಿಲ್ಲಿಸದೆ ಪರಾರಿಯಾಗಿತ್ತು. ಇದರಿಂದ ಸಂಶಯ ಗೊಂಡ ಪೊಲೀಸರು ಆಟೋ ರಿಕ್ಷಾ ವನ್ನು ಬೆನ್ನಟ್ಟಿ ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ವೇಳೆ ಅದರಲ್ಲಿದ್ದವರು ಓಡಿ ಪರಾರಿಯಾಗಲೆತ್ನಿಸಿದ್ದರು. ಕೂಡಲೇ ಬಲಪ್ರಯೋಗಿಸಿ ಅವರನ್ನು ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಚಾಲಕನ ಸೀಟಿನಡಿ ಭಾಗವನ್ನು ಪರಿಶೀಲಿಸಿದಾಗ ಮಾದಕ ವಸ್ತು ಪತ್ತೆಯಾಗಿದೆಯೆಂದು ಪೊಲೀಸರುತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಜ್ಯೂನಿಯರ್ ಸಿ.ಆರ್. ಮೌಸಮಿ, ಸಿಟಿಒಗಳಾದ ಶ್ಯಾಮ್‌ಚಂದ್ರನ್, ರಮೇಶ್, ಚಾಲಕ ಜಿತೀಶ್ ಎಂಬಿವರಿದ್ದರು.






