ಕಾಸರಗೋಡು: ಕಾಸರಗೋಡು ಸಬ್ ಜೈಲಿನಲ್ಲಿ ಪೋಕ್ಸೋ ಪ್ರಕರಣದ ರಿಮಾಂಡ್ ಆರೋಪಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಮುಂದುವರಿ ದಿದೆ. ಸಾವಿಗೆ ಕಾರಣ ಪತ್ತೆಹಚ್ಚಲು ಮೃತದೇಹದಿಂದ ಸಂಗ್ರಹಿಸಿದ ಗಂಟಲ ದ್ರವವನ್ನು ರಾಸಾಯನಿಕ ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ. ಇದರ ವರದಿ ಲಭಿಸಿದರೆ ಮಾತ್ರವೇ ಸಾವಿಗೆ ಕಾರಣವೇನೆಂದು ತಿಳಿಯಬಹುದಾಗಿದೆ ಯೆಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿದ್ಯಾನಗರ ಪೊಲೀಸರು 2016ರಲ್ಲಿ ದಾಖಲಿಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯಾದ ದೇಳಿ ಕುನ್ನುಪ್ಪಾರದ ಮುಬಶೀರ್(29) ನಿನ್ನೆ ಮುಂಜಾನೆ ಮೃತಪಟ್ಟಿದ್ದಾನೆ. ಸಬ್ ಜೈಲಿನಲ್ಲಿ ಶಾರೀರಿಕ ಅಸ್ವಸ್ಥತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಈತನನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲವೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಸಾವಿಗೆ ಸಂಬಂಧಿಸಿ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದುದರಿಂದ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಾವಿಗೆ ಕಾರಣವೇನೆಂದು ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟಗೊಂಡಿಲ್ಲ.
ದೇಹದಲ್ಲಿ ಯಾವುದೇ ಗಾಯಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ ಹೃದಯಾಘಾ ತವೂ ಉಂಟಾಗಿಲ್ಲವೆಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ರಾಸಾಯನಿಕ ತಪಾಸಣೆಗಾಗಿ ಗಂಟಲ ದ್ರವವನ್ನು ಕಳುಹಿಸಿಕೊಡಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.






