ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕಳವುಗೈದಿದ್ದ 3.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ಗಳನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಈ ತಿಂಗಳ 24ರಂದು ಸ್ವಾತಿ ನಂದಿಪಳ್ಳಿ ತಮ್ಮ ಸ್ನೇಹಿತ ರೋಹಿತ್ ನೆಮ್ಮಲೆಟ್ಟಿ ಅವರೊಂದಿಗೆ ಪಣಂಬೂರು ಕಡಲತೀರಕ್ಕೆ ತಲುಪಿದ್ದರು. ತಮ್ಮ ಚಿನ್ನದ ಸರ (12 ಗ್ರಾಂ), ಲಾಕೆಟ್ (2 ಗ್ರಾಂ), ತಲಾ 2 ಗ್ರಾಂನ ಎರಡು ಉಂಗುರಗಳು, 4 ಗ್ರಾಂನ ಕಿವಿಯೋಲೆಗಳು, ಒಂದು ಮೊಬೈಲ್ ಫೋನ್, ರೋಹಿತ್ ಅವರ ಸ್ಯಾಮ್ಸಂಗ್ ಫೋನನ್ನು ಬ್ಯಾಗ್ನಲ್ಲಿ ಹಾಕಿ ಸಮುದ್ರ ದಡದಲ್ಲಿಟ್ಟು ಈಜಲು ತೆರಳಿದ್ದರು. 11.50ರ ವೇಳೆ ಹಿಂತಿರುಗಿ ಬಂದು ನೋಡಿದಾಗ ಬ್ಯಾಗ್ ಕಾಣೆಯಾಗಿತ್ತು. ಕಳವಾದ ಮಾಲುಗಳ ಒಟ್ಟು 3,33,000 ರೂ. ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ನಗರ ಪೊಲೀಸರು ತನಿಖೆ ನಡೆಸಿ ಕಳ್ಳತನದಲ್ಲಿ ಭಾಗಿಯಾದ ಬಾಲಕನನ್ನು ಪತ್ತೆಹಚ್ಚಿ ಮಾಲುಗಳನ್ನು ವಶಪಡಿಸಿದ್ದಾರೆ.







