ಪಯ್ಯನ್ನೂರು: ಪ್ರಸಿದ್ಧ ಕ್ಷೇತ್ರವಾದ ಮಾಡಾಯಿಕಾವುನಲ್ಲಿ ಬಲಿವಾಡು ಸೇವೆಗೆ ನಕಲಿ ರಶೀದಿ ಉಪಯೋಗಿಸಿ ಹಣ ವಂಚಿಸಿದ ನೌಕರನನ್ನು ಅಮಾನತುಗೊಳಿಸಲಾಗಿದೆ. ಮಲಬಾರ್ ದೇವಸ್ವಂ ಎಂಪ್ಲೋಯಿಸ್ ಯೂನಿಯನ್ (ಸಿಐಟಿಯು) ಮಾಡಾಯಿ ಏರಿಯಾ ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯನಾದ ಎ.ವಿ. ಅನೀಶ್ (೪೫) ವಂಚನೆ ನಡೆಸಿರುವ ವ್ಯಕ್ತಿ. ಮಾಡಾಯಿಕಾವ್‌ನ ಕೌಂಟರ್‌ನಲ್ಲಿ ಕರ್ತವ್ಯದಲ್ಲಿದ್ದ ನೌಕರನಾಗಿದ್ದಾನೆ ಈತ. ಸೋಮವಾರ ಕ್ಷೇತ್ರದರ್ಶನಕ್ಕೆ ತಲುಪಿದ ಕರ್ನಾಟಕ ನಿವಾಸಿಗೆ ನೀಡಿದ ಸೇವಾ ರಶೀದಿಯ ನಕಲಿ ಪ್ರತಿಯನ್ನು ಇನ್ನೋರ್ವರಿಗೆ ರಶೀದಿಯಾಗಿ ನೀಡಿ ಹಣವನ್ನು ಜೇಬಿಗಿಳಿಸಿರುವುದಾಗಿ ದೂರಲಾಗಿದೆ. ಕರ್ನಾಟಕ ನಿವಾಸಿಗೆ ನೀಡಿದ ರಶೀದಿಯ ಪ್ರತಿ ತೆಗೆದು ಅದರ ಹೆಸರನ್ನು ಅಳಿಸಿ ಇನ್ನೊಬ್ಬರಿಗೆ ನೀಡಿ ವಂಚಿಸಲಾಗಿದೆ. ಶಂಕೆ ತೋರಿದ ಅರ್ಚಕ ನಡೆಸಿದ ತನಿಖೆಯಲ್ಲಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಎಕ್ಸಿಕ್ಯೂಟಿವ್ ಆಫೀಸರ್ ಸ್ಥಳಕ್ಕೆ ತಲುಪಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ೩೦೦ ರೂ.ಗಳ ನಾಲ್ಕು ನಕಲಿ ರಶೀದಿಯನ್ನು ಪತ್ತೆಹಚ್ಚಲಾಗಿದೆ.







