ಜಿಲ್ಲಾ ಪಂಚಾಯತ್ ಚುನಾವಣೆ: ಚೆಂಗಳ ಮಂಡಲದಲ್ಲಿ ತೀವ್ರ ಸ್ಪರ್ಧೆ ಒಡ್ಡುತ್ತಿರುವ ಐಕ್ಯರಂಗ

ಕಾಸರಗೋಡು: ಜಿಲ್ಲಾ ಪಂಚಾಯತ್ ಚೆಂಗಳ ಡಿವಿಶನ್‌ನಲ್ಲಿ ಕಳೆದ ಬಾರಿ ಎಡರಂಗದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಾನವಾಸ್ ಪಾದೂರು 16,564 ಮತ ಪಡೆದು ಜಯ ಗಳಿಸಿದ್ದಾರೆ. ಲೀಗ್‌ನ ಟಿ.ಡಿ. ಕಬೀರ್ 14,425 ಮತಗಳನ್ನು ಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ ಧನಂಜಯ ಮಧೂರು ೫೭೬೦ ಮತವಷ್ಟೇ ಪಡೆದಿದ್ದರು. ಈ ಬಾರಿಯೂ ಮಂಡಲವನ್ನು ಸ್ವಾಧೀನಪಡಿಸಿಕೊಳ್ಳಲು ಎಡರಂಗ ಪ್ರಯತ್ನಿಸುತ್ತಿರುವ ಮಧ್ಯೆ ಯುಡಿಎಫ್‌ನಿಂದ ಕಸಿದುಕೊಂಡ ಈ ಮಂಡಲವನ್ನು ತನ್ನ ತೆಕ್ಕೆಗೆ ಪಡೆಯಲು ಐಕ್ಯರಂಗ ಕೂಡಾ ಶತಪ್ರಯತ್ನದಲ್ಲಿದೆ.  ಈ ಬಾರಿ ಈ ಮಂಡಲ ಮಹಿಳಾ ಮೀಸಲಾತಿಯಾಗಿ ಬದಲಾದರೂ ಪ್ರಮುಖ ಪಕ್ಷಗಳು ಶಕ್ತರಾದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದಾರೆ. ತ್ರಿಕೋನ ಸ್ಪರ್ಧೆ ಇಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಡಿ-ಲಿಮಿಟೇಶನ್ ನಡೆದಾಗ ಮಂಡಲ ರೂಪು ಕೂಡಾ ಬದಲಾಗಿದ್ದು, ಸ್ಪರ್ಧೆಯ ರೀತಿಯೂ ಬದಲಾಗಿದೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿ ಮಂಡಲವನ್ನು ವಶಪಡಿಸಿದ ಹಿನ್ನೆಲೆಯಲ್ಲಿ ಎಡರಂಗ ಈ ಬಾರಿ ಕೂಡಾ ಸ್ವತಂತ್ರ ಅಭ್ಯರ್ಥಿಯನ್ನೇ ಪರೀಕ್ಷಿಸುತ್ತಿದೆ. ಕೊಡೆ ಚಿಹ್ನೆಯಲ್ಲಿ ಸಹರ್‌ಬಾನು ಸಾಗರ್ ಸ್ಪರ್ಧಿಸುತ್ತಿದ್ದು, ಚುನಾವಣಾ ವಲಯಕ್ಕೆ ಇವರು ಪ್ರಥಮವಾಗಿ ಪಾದಾರ್ಪಣೆಗೈದಿದ್ದರೂ ಪ್ರಚಾರ ಕಾರ್ಯಗಳಲ್ಲಿ ಅದು ತೊಂದರೆಯಾಗಿ ಪರಿಣಮಿಸಲಿಲ್ಲ.

ಐಕ್ಯರಂಗದಿಂದ ಜಸ್ನ ಮನಾಫ್ ತೀವ್ರ ಸ್ಪರ್ಧೆಯೊಡ್ಡುತ್ತಿದ್ದು, ವನಿತಾ ಲೀಗ್ ಚೂರಿಮೂಲೆ ಘಟಕದ ಪದಾಧಿಕಾರಿಯಾಗಿ ದ್ದಾರೆ.  ಪ್ರಥಮವಾಗಿ ಸ್ಪರ್ಧಿಸುತ್ತಿದ್ದರೂ ಈ ಬಾರಿ ಜಯ ತನಗೆ ಖಚಿತವೆಂಬ ನಿರೀಕ್ಷೆಯಲ್ಲಿ ಜಸ್ನ ಚಟುವಟಿಕಾನಿರತರಾಗಿದ್ದಾರೆ. ಬಿಜೆಪಿಯಿಂದ ಶುಭಲತ ಸ್ಪರ್ಧಿಸುತ್ತಿದ್ದು, ಅಭಿವೃದ್ಧಿ ವಿಷಯದಲ್ಲಿ ತನ್ನ ನಿಲುವನ್ನು ಜನರಿಗೆ ತಲುಪಿಸುತ್ತಾ ಇವರು ಕೂಡಾ ಪ್ರಚಾರಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಂಡಲದಲ್ಲಿ ತ್ರಿಕೋನಸ್ಪರ್ಧೆ ಕಂಡು ಬರುತ್ತಿದೆ.

RELATED NEWS

You cannot copy contents of this page