ಕಾಸರಗೋಡು: ಜಿಲ್ಲಾ ಪಂಚಾಯತ್ನ ಸಿವಿಲ್ ಸ್ಟೇಷನ್ ಡಿವಿಶನ್ನಲ್ಲಿ 17,177 ಮತಗಳನ್ನು ಪಡೆದು ಕಳೆದ ಬಾರಿ ಲೀಗ್ನ ಜಾಸ್ಮಿನ್ ಕಬೀರ್ ಜಯ ಗಳಿಸಿದ್ದರು. ಬಿಜೆಪಿಯ ಪುಷ್ಪಾ ಗೋಪಾಲನ್ 13,612 ಮತ ಗಳಿಸಿದ್ದರು. ಈ ಬಾರಿ ಮುಸ್ಲಿಂ ಲೀಗ್ನಿಂದ ಪಿ.ಬಿ. ಶಫೀಕ್ ಸ್ಪರ್ಧಿಸುತ್ತಿದ್ದು, ಇವರು ಕಳೆದ ಬಾರಿ ದೇಲಂಪಾಡಿ ಪಂಚಾಯತ್ನ್ನು ಐಕ್ಯರಂಗದ ಬಗಲಿಗೆ ಹಾಕಿದವರಾಗಿದ್ದಾರೆ. ದ್ವಿತೀಯ ಬಾರಿ ಈಗ ಸಿವಿಲ್ ಸ್ಟೇಷನ್ ಡಿವಿಶನ್ನಿಂದ ಸ್ಪರ್ಧಿಸುತ್ತಿದ್ದಾರೆ. ಯುಡಿಎಫ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಗೆ ಪರಿಗಣಿಸಲ್ಪಡುವ ವ್ಯಕ್ತಿ ಕೂಡಾ ಇವರಾಗಿದ್ದು, ಇವರ ಜಯ ಸುಲಭವೆಂದು ಲೆಕ್ಕಹಾಕಲಾಗಿದೆ. ಯೂತ್ಲೀಗ್ ಮುಖಂಡ ಎಂಬ ನೆಲೆಯಲ್ಲಿ ಈ ವಲಯದಲ್ಲಿ ಸಂಪೂರ್ಣ ಪರಿಚಿತಮುಖವಾಗಿದ್ದಾರೆ. ಇದೇ ವೇಳೆ ಗ್ರಾಮ ಪಂಚಾಯತ್ ಜ್ಯಾರಿಯಾದ ಬಳಿಕ ಬಿಜೆಪಿ ಆಡಳಿತ ನಡೆಸುತ್ತಿರುವ ಮಧೂರು ಪಂಚಾಯತ್ನ ೨೩ ವಾರ್ಡ್ಗಳು ಒಳಗೊಂಡ ಸಿವಿಲ್ ಸ್ಟೇಷನ್ ವಾರ್ಡ್ನಲ್ಲಿ ಬಿಜೆಪಿ ಕೂಡಾ ತೀವ್ರ ಸ್ಪರ್ಧೆ ಒಡ್ಡುತ್ತಿದ್ದು, ಈ ಬಾರಿ ಈ ಡಿವಿಶನ್ ವಶಪಡಿಸುವ ಪ್ರಯತ್ನ ನಡೆಸುತ್ತಿದೆ.
ಪಿ.ಆರ್. ಸುನಿಲ್ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ರಾಜಕೀಯದ ಅನುಭವ ಹಾಗೂ ಜನರೊಂದಿಗಿನ ಸಂಪರ್ಕ ತನ್ನ ಗೆಲುವಿಗೆ ಕಾರಣವಾಗಲಿದೆ ಎಂದು ಅವರು ತಿಳಿದಿದ್ದಾರೆ. ಎಡರಂಗದಲ್ಲಿ ಐಎನ್ಎಲ್ಗೆ ನೀಡಿದ ಈ ಡಿವಿಶನ್ನಿಂದ ಐಎನ್ಎಲ್ ಜಿಲ್ಲಾ ಕಾರ್ಯದರ್ಶಿಯಾಗಿರುವ ಶಾಫಿ ಸಂತೋಷ್ನಗರ್ ಸ್ಪರ್ಧಿಸುತ್ತಿದ್ದಾರೆ. ವೈಯಕ್ತಿಕವಾಗಿ ಇವರು ಈ ಮಂಡಲದಲ್ಲಿ ಪರಿಚಿತರಾಗಿದ್ದಾರೆ. ಸಿವಿಲ್ ಸ್ಟೇಷನ್ ಡಿವಿಶನ್ ಜಿಲ್ಲಾ ಪಂಚಾಯತ್ನ ಪ್ರಧಾನ ಕೇಂದ್ರ ಒಳಗೊಂಡ ಡಿವಿಶನ್ ಆಗಿದೆ. ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ ಸಹಿತ ಸರಕಾರದ ಪ್ರಮುಖ ಸಂಸ್ಥೆಗಳು ಈ ಡಿವಿಶನ್ನಲ್ಲಿದೆ. ಯಾವುದೇ ಸಂದರ್ಭದಲ್ಲಿ ಯುಡಿಎಫ್ನ್ನು ಕೈಬಿಡದ ಡಿವಿಶನ್ ಆಗಿದೆ ಸಿವಿಲ್ ಸ್ಟೇಷನ್. ಈ ಡಿವಿಶನ್ನ್ನು ಐಕ್ಯರಂಗದಿಂದ ಕಸಿದುಕೊಳ್ಳಲು ಬಿಜೆಪಿ ಹಾಗೂ ಎಡರಂಗ ಶತಪ್ರಯತ್ನದಲ್ಲಿ ತೊಡಗಿದೆ. ಇದೇ ವೇಳೆ ಹೋರಾಟಕ್ಕೆ ಕಿಚ್ಚು ಹೆಚ್ಚಿಸಲು ಎಸ್ಡಿಪಿಐ ಕೂಡಾ ಈ ಡಿವಿಶನ್ನಲ್ಲಿ ಸ್ಪರ್ಧಿಸುತ್ತಿದೆ. ಕಾಸರಗೋಡು ಬ್ಲೋಕ್ ಪಂಚಾಯತ್ನ ಎರಿಯಾಲ್, ಸೂರ್ಲು, ರಾಮ್ದಾಸ್ ನಗರ, ಉಳಿಯತ್ತಡ್ಕ, ಸಿವಿಲ್ ಸ್ಟೇಷನ್ ಎಂಬೀ ಡಿವಿಶನ್ಗಳು ಜಿಲ್ಲಾ ಪಂಚಾಯತ್ನ ಈ ಡಿವಿಶನ್ನಲ್ಲಿದೆ. ಯುಡಿಎಫ್ನ ಆಳ್ವಿಕೆಯಿರುವ ಮೊಗ್ರಾಲ್ಪುತ್ತೂರು ಪಂಚಾಯತ್ನ 1, 3 ವಾರ್ಡ್ಗಳನ್ನು ಹೊರತುಪಡಿಸಿ ಉಳಿದ 15 ವಾರ್ಡ್ಗಳು ಹಾಗೂ ಚೆಂಗಳದ 6 ವಾರ್ಡ್, ಬಿಜೆಪಿ ಆಡಳಿತದಲ್ಲಿರುವ ಮಧೂರು ಪಂಚಾಯತ್ನ 5, 9 ವಾರ್ಡ್ಗಳನ್ನು ಹೊರತುಪಡಿಸಿ ಉಳಿದ 22 ವಾರ್ಡ್ಗಳು ಸಿವಿಲ್ ಸ್ಟೇಷನ್ ಡಿವಿಶನ್ನಲ್ಲಿ ಸೇರಿದೆ. 62,064 ಮತದಾರರಿರುವ ಈ ಮಂಡಲದಲ್ಲಿ ಮೂರೂ ರಂಗಗಳು ಜಯ ನಿರೀಕ್ಷೆಯನ್ನು ಹೊಂದಿವೆ.







