ಎರಡನೇ ಲೈಂಗಿಕ ಪ್ರಕರಣದಲ್ಲೂ ರಾಹುಲ್‌ಗೆ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು: ಸರಕಾರ ಮೇಲ್ಮನವಿಯತ್ತ

ತಿರುವನಂತಪುರ: ತಿರುವನಂತಪು ರದ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲಿಸಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಬೆಂಗಳೂರಿನ ನಿವಾಸಿಯಾಗಿರುವ ೨೪ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲೂ ರಾಹುಲ್‌ಗೆ ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮುಂದಿನ ಮೂರು ತಿಂಗಳಲ್ಲಿ ಎರಡು ದಿನಗಳಿಗೊಮ್ಮೆ ತನಿಖಾ ತಂಡದ ಮುಂದೆ ಹಾಜರಾಗಿ ಅಲ್ಲಿ ಸಹಿ ಹಾಕಬೇಕೆಂಬ  ಶರತ್ತಿನ ಮೇಲೆ  ನ್ಯಾಯಾಲಯ ಈ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ  ಯುವತಿ ನೀಡಿದ ದೂರಿನಲ್ಲಿ ಹೊರಿಸಲಾಗಿರುವ ಆರೋಪಗಳು ಗಂಭೀರವಾಗಿದೆ. ೨೦೨೩ರಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದ್ದರೂ, ಆ ಬಗ್ಗೆ ಆಕೆ ವಿಳಂಬವಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ದೂರು ಕಳುಹಿಸಿಕೊಟ್ಟಿರುವುದು ಹಾಗೂ ಎಫ್‌ಐಆರ್ ಮತ್ತು ಯುವತಿ ನೀಡಿರುವ ಹೇಳಿಕೆಗಳು ಪರಸ್ಪರ ಹೊಂದಿಕೆಯಾಗುತ್ತಿಲ್ಲ. ಮಾತ್ರವಲ್ಲ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಪ್ರಾಥಮಿಕ ಪುರಾವೆಗಳು ಲಭಿಸಿಲ್ಲ. ಲೈಂಗಿಕ ಕಿರುಕುಳ ಆರೋಪದ ದೂರನ್ನು ನೇರವಾಗಿ ಪೊಲೀಸರಿಗೆ ನೀಡದೆ, ಅದನ್ನು ಕಾಂಗ್ರೆಸ್ ರಾಜ್ಯ ಅಧ್ಯಕ್ಷರಿಗೆ ನೀಡಿರುವುದು ಶಂಕೆಗೆ ದಾರಿ ಮಾಡಿಕೊಡುತ್ತಿದೆ ಎಂದೂ ನ್ಯಾಯಾಲಯ ಹೇಳಿದೆ. ಈ ದೂರಿನ ಹಿಂದೆ ಬಾಹ್ಯ ಒತ್ತಡ ಉಂಟಾಗಿದೆ ಎಂಬ ರಾಹುಲ್‌ರ ವಾದವನ್ನು   ಅಲ್ಲಗಳೆಯುವಂತಿಲ್ಲವೆಂದೂ ನ್ಯಾಯಾಲಯ ಹೇಳಿದೆ.

ಇದೇ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ರಾಹುಲ್‌ಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ಮುಂದಾಗಿದೆ.

RELATED NEWS

You cannot copy contents of this page