ಮಡಿಕೇರಿ: ಅಕ್ರಮ ಸಂಬಂಧ ಶಂಕಿಸಿ ದ್ವೇಷದಿಂದ ಪತ್ನಿ, ಮಗಳು, ಅಜ್ಜ, ಅಜ್ಜಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ವಿರಾಜಪೇಟೆ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ಘೋಷಿಸಿದೆ. ಕೇರಳದ ವಯನಾಡು ಜಿಲ್ಲೆ ತಿರುನಲ್ಲಿ ಅಪ್ಪಪ್ಪಾರೆ ನಿವಾಸಿ ಗಿರೀಶ್ (38) ಗಲ್ಲುಶಿಕ್ಷೆಗೊಳಗಾದ ಆರೋಪಿ. ಜೇನು ಕುರುಬರ ಕರಿಯ (75), ಇವರ ಪತ್ನಿ ಗೌರಿ (70), ಗಿರೀಶ್ನ ಪತ್ನಿ ನಾಗಿ (), ಮಲಮಗಳು ಕಾವೇರಿ (6), ಈ ನಾಲ್ವರನ್ನು ಆರೋಪಿ ಗಿರೀಶ್ ಕಡಿದು ಕೊಲೆಗೈಯ್ಯಲಾಗಿದೆ.
ಪೊನ್ನಂಪೇಟೆ ತಾಲೂಕು ಬೇಗೂರು ಬಾಳೆಯಂಗಾಡ್ ಗ್ರಾಮದ ಜೋಡುಮಾಡಂ ವಿಕ್ರಮ್ ಎಂಬವರ ತೋಟದ ಸಮೀಪ ಜೇನು ಕುರುಬರ ಕರಿಯ ಕುಟುಂಬ ವಾಸಿಸುತ್ತಿತ್ತು. ಕರಿಯರ ಮೊಮ್ಮಗಳು ನಾಗಿ ಎರಡು ಮದುವೆಯಾಗಿದ್ದು, ಅವರಿಬ್ಬರನ್ನು ತ್ಯಜಿಸಿದ್ದಳು. ನಂತರ ಕೇರಳೀಯನಾದ ಗಿರೀಶ್ನನ್ನು ಮೂರನೇ ವಿವಾಹವಾಗಿ ಒಂದು ತಿಂಗಳು ಗಿರೀಶ್ನ ಮನೆಯಲ್ಲಿ ವಾಸವಿದ್ದಳು. ಮೊದಲ ಪತಿಯಿಂದ ಕಾವೇರಿ ಎಂಬ ಪುತ್ರಿಯೂ ಈಕೆಗಿತ್ತು. ಆ ಬಳಿಕ ನಾಗಿ ಹಾಗೂ ಗಿರೀಶ್ ಅಜ್ಜನ ಜೊತೆಯಲ್ಲಿ ಬೇಗೂರಿನಲ್ಲಿ ಬಂದು ವಾಸ ಆರಂಭಿಸಿದರು. ದಿನ ಕಳೆದಂತೆ ಗಿರೀಶ್ ಪತ್ನಿಗೆ ಉಪಟಳ ನೀಡಲಾರಂಭಿಸಿದ್ದು, ಹಣಕ್ಕಾಗಿ ಪೀಡಿಸಲು ತೊಡಗಿದ್ದನು. 2025 ಮಾರ್ಚ್ 27ರಂದು ರಾತ್ರಿ ಊಟ ಮಾಡಿ ಕುಳಿತಿದ್ದ ಸಮಯದಲ್ಲಿ ಏಕಾಏಕಿ ಗಿರೀಶ್ ಪತ್ನಿಯೊಂದಿಗೆ ಜಗಳಕ್ಕೆ ಮುಂದಾಗಿದ್ದು, ‘ನೀನು ಬೇರೆ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದೆ’ ಎಂದು ಆರೋಪಿಸಿದನು. ಇದು ಜಗಳಕ್ಕೆ ಕಾರಣವಾಗಿದ್ದು ನಂತರ ಅದು ವೀಪರೀತಕ್ಕೆ ತಲುಪಿ ನಾಲ್ಕು ಮಂದಿಯ ಕೊಲೆಗೆ ಕಾರಣ ವಾಗುತ್ತದೆ. ಬಳಿಕ ಅಲ್ಲಿಂದ ಪರಾರಿಯಾದ ಗಿರೀಶ್ನನ್ನು ಮರುದಿನ ಕೇರಳಕ್ಕೆ ಪರಾರಿಯಾ ಬಗ್ಗೆ ಸುಳಿವು ಲಭಿಸಿದ ಪೊಲೀಸರು ವಯನಾಡು ಪೊಲೀಸರ ಸಹಾಯದೊಂದಿಗೆ ಅಪ್ಪಪ್ಪಾರೆ ಯಿಂದ ಬಂಧಿಸುತ್ತಾರೆ. ಬಳಿಕ ನಡೆದ ವಿಚಾರಣೆಯಲ್ಲಿ ನಿನ್ನೆ ಈತನಿಗೆ ಶಿಕ್ಷೆ ಘೋಷಿಸಲಾಗಿದೆ.
ಕೊಡಗಿನ ಇತಿಹಾಸದಲ್ಲೇ ಆರೋಪಿಯೋರ್ವನಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಇದೇ ಪ್ರಥಮವಾಗಿದೆ.







