ಕೊಚ್ಚಿ: ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಎರ್ನಾಕುಳಂ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಲಾ 20 ವರ್ಷ ಕಠಿಣ ಸಜೆ ಹಾಗೂ ಒಟ್ಟಾರೆಯಾಗಿ 9.75 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಕಳೆದ ಅವಧಿಯನ್ನೂ ಶಿಕ್ಷಾ ಅವಧಿಯಾಗಿ ಪರಿಗಣಿಸಿ ಬಾಕಿ ಶಿಕ್ಷೆಯನ್ನು ಆರೋಪಿಗಳು ಅನುಭವಿಸಿದರೆ ಸಾಕೆಂದು, ಜುಲ್ಮಾನೆ ಮೊತ್ತವನ್ನು ಆರೋಪಿಗಳು ಸಂತ್ರಸ್ಥೆಗೆ ನೀಡಬೇಕೆಂದು ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ. ಪಲ್ಸರ್ ಸುನಿ ಅಲಿಯಾಸ್ ಎನ್.ಎಸ್. ಸುನಿಲ್ (37), ಮಾರ್ಟಿನ್ ಆಂಟನಿ (33), ಬಿ. ಮಣಿಕಂಠನ್ (36), ವಿ.ಪಿ. ವಿಜೀಶ್ (38), ವಡಿವಾಳ್ ಸಲೀಂ ಅಲಿಯಾಸ್ ಎಚ್. ಸಲೀಂ (39), ಪ್ರದೀಪ್ (31) ಎಂಬವರು ಈ ಪ್ರಕರಣದ ತಲಾ ಒಂದರಿಂದ ಆರು ಮಂದಿ ಆರೋಪಿಗಳಾಗಿದ್ದಾರೆ. ಅವರಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ನಟ ದಿಲೀಪ್ ಸೇರಿದಂತೆ ನಾಲ್ವರು ಆರೋಪಿಗಳ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯ ಕಳೆದ ವಾರವೇ ಖುಲಾಸೆಗೊಳಿಸಿ ತೀರ್ಪು ನೀಡಿತ್ತು.







