ಕಾಸರಗೋಡು: ಸುಲಭದಲ್ಲಿ ಯಾವುದು ಸಾಧ್ಯವಿಲ್ಲವೆಂದು ತಿಳಿದುಕೊಳ್ಳಲಾಗಿತ್ತೋ ಅದನ್ನು ಸಾಧ್ಯವೆಂದು ಮಾಡಿ ತೋರಿಸಿದ ಓರ್ವ ಕೃಷಿಕ ನಗರ ಮಧ್ಯದಲ್ಲಿದ್ದಾರೆ ಎಂದರೆ ಮೂಗಿಗೆ ಬೆರಳೇರಿಸಬೇಕಾಗಿದೆ. ಕಾಸರಗೋಡಿನ ಹವಾಮಾನಕ್ಕೆ ಸೂಕ್ತವಲ್ಲದ ಕಾಫಿ ಕೃಷಿಯನ್ನು ಮಾಡಿ ಯಶಸ್ವಿಯಾದ ಓರ್ವ ನಾಟಕ ಕಲಾವಿದನ ಸಾಧನೆಯನ್ನು ಗಮನಿಸಿ ನಗರಸಭೆ, ಕೃಷಿ ಭವನ ಇವರನ್ನು ಗೌರವಿಸಿತ್ತು. ಆನೆಬಾಗಿಲು ರಸ್ತೆ ಬದಿಯ ನಿವಾಸಿ ನಾಗರಾಜ್ ಈ ಸಾಧನೆ ಮಾಡಿದವರು. ಯವನಿಕ ಕಾಸರಗೋಡು ಇದರ ನಟನಾಗಿ ವಿವಿಧ ಬೀದಿ ನಾಟಕಗಳಲ್ಲಿ ಅಭಿನಯಿಸಿ ದೂರದರ್ಶನದಲ್ಲಿ ಕೂಡಾ ಪ್ರಸಾರಗೊಂಡ ನಾಟಕದಲ್ಲಿ ಅಭಿನಯಿಸಿರುವ ಇವರು ಕೃಷಿಯಲ್ಲೂ ಆಸಕ್ತರಾಗಿದ್ದರು. ಇವರು ಅಭಿನಯಿಸಿದ ‘ಮಣ್ಣಿನ ಗೊಂಬೆ’ ಎಂಬ ನಾಟಕ ಬಹಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಆದರೆ ಈಗ ನಾಟಕಗಳು ಕಡಿಮೆಯಾಗಿದ್ದು, ನಾಟಕ ತಂಡಗಳು ನಿಷ್ಕ್ರಿಯವಾಗಿವೆ ಎಂದು ಇವರು ತಿಳಿಸುತ್ತಾರೆ. ಓರ್ವ ನಾಟಕ ಕಲಾವಿದನಾಗಿ ಹಲವು ಕಡೆಗಳಲ್ಲಿ ಇವರು ನಾಟಕ ಪ್ರದರ್ಶನ ನೀಡಿದ್ದು, ಉಡುಪಿಯಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಯವನಿಕ ತಂಡಕ್ಕೆ ಬಹುಮಾನ ಲಭಿಸಿತ್ತು ಎಂದಿದ್ದಾರೆ. ಕಳೆದ ಓಣಂ ಹಬ್ಬ ಕಾಲದಲ್ಲಿ ಎಲ್‌ಐಸಿ ಸಂಸ್ಥೆಯ ವತಿಯಿಂದ ನಡೆಸಿದ ಕಾರ್ಯಕ್ರಮದಲ್ಲಿ ಮಾವೇಲಿ ವೇಷ ಧರಿಸಿ ಇವರು ಗಮನ ಸೆಳೆದಿದ್ದರು.
2005ರಲ್ಲಿ 100 ಕಾಫಿ ಗಿಡಗಳನ್ನು ತಂದು ನೆಟ್ಟು ಬೆಳೆಸಿದ ಇವರ ಹಿತ್ತಿಲಲ್ಲಿ ಈಗ 29ರಷ್ಟು ಗಿಡಗಳು ಫಸಲು ನೀಡುತ್ತಿವೆ. ಕರ್ನಾಟಕದ ಹಾಸನದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ಸಮಯದಲ್ಲಿ ಕಾಫಿ ಕೃಷಿಯನ್ನು ಕಂಡು ಆಕರ್ಷಿತರಾಗಿ ನಮ್ಮಲ್ಲೂ ಈ ಕೃಷಿ ಮಾಡಿದರೆ ಹೇಗೆ ಎಂಬ ಚಿಂತನೆ ಮೂಡಿರುವುದೇ ಕಾಸರಗೋಡು ನಗರಸಭೆಯಲ್ಲಿ ಪ್ರಥಮವಾಗಿ ಕಾಫಿ ಕೃಷಿ ನಡೆಸಲು ಇವರಿಗೆ ಪ್ರೇರಣೆಯಾಗಿರುವುದು.
ಕಾಸರಗೋಡು ಕೆನರಾ ಬ್ಯಾಂಕ್‌ನ ಪಿಗ್ಮಿ ಏಜೆಂಟ್ ರಾಗಿರುವ ಇವರು ಎಲ್‌ಐಸಿಯ ಹಿರಿಯ ಏಜೆಂಟ್ ಕೂಡಾ ಆಗಿದ್ದಾರೆ. ನಗರ ಮಧ್ಯದಲ್ಲಿ ೫ ಅಡಿ ಎತ್ತರದ ವರೆಗೆ ಬೆಳೆದಿರುವ ಗಿಡಗಳಲ್ಲಿ ಈಗ ಫಸಲು ಲಭಿಸುತ್ತಿದೆ. ಜೂನ್, ಜುಲೈ ತಿಂಗಳಲ್ಲಿ ಸುರಿಯುವ ಮಳೆಗೆ ಹೂ ಬಿಡುವ ಈ ಗಿಡಗಳು ನವಂಬರ್, ಡಿಸೆಂಬರ್ ತಿಂಗಳಲ್ಲಿ ಕಾಯಿ ಕೊಯ್ಲಿಗೆ ಪಾಕವಾಗುತ್ತದೆ. ತಂಪಾಗಿರುವ ಹವೆ ಅಗತ್ಯವಿರುವ ಈ ಕೃಷಿ ಯಶಸ್ವಿಯಾಗಲು ಪರಿಸರವನ್ನು ತಂಪುಗೊಳಿಸಬೇಕಾಗಿದ್ದು, ಇದಕ್ಕಾಗಿ ಇವರು ಸುತ್ತುಮುತ್ತ ಅಡಿಕೆ, ತೆಂಗು, ಬಾಳೆ ಹಾಗೂ ಇತರ ಗಿಡಗಳನ್ನು ನೆಟ್ಟಿದ್ದಾರೆ. ಇದರಿಂದಾಗಿ ಈ ಪ್ರದೇಶವು ಈಗ ತಂಪಾಗಿದ್ದು, ಅದು ಕಾಫಿ ಬೆಳೆಗೆ ಸೂಕ್ತವೆನಿಸಿತು.
ಸುಮಾರು 30 ಕಿಲೋ ಗ್ರಾಂನಷ್ಟು ಕಾಫಿ ಇವರಿಗೆ ಇಲ್ಲಿಂದ ಲಭಿಸುತ್ತಿದೆ ಎಂದು ಇವರು ತಿಳಿಸಿದ್ದು, ಅದನ್ನು ತಮ್ಮ ಸ್ವಂತಕ್ಕಾಗಿ ಉಪಯೋಗಿಸುತ್ತಿದ್ದು ಹಾಗೂ ಸಂಬಂ ಧಿಕರಿಗೆ ನೀಡುತ್ತಿದ್ದಾರೆ. ತಂದೆ ಶ್ರೀನಿವಾಸ ಕರ್ನಾಟಕ, ಕೇರಳದಲ್ಲಿ ಫಾರೆಸ್ಟರ್ ಆಗಿದ್ದರು. ಬಳಿಕ ಇವರು ಕೇರಳದಲ್ಲಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಪತ್ನಿ ಆಶಾ ಎನ್. ರಾವ್ ಕೂಡಾ ಇವರ ಕೃಷಿಗೆ ಸಹಕರಿಸುತ್ತಿದ್ದಾರೆ. ಪುತ್ರಿ ಮಂಗಳೂರು ಕಾಲೇಜಿನಲ್ಲಿ ಬಿ.ಕಾಂ ಕಲಿಯುತ್ತಿದ್ದಾರೆ. ನಗರಮಧ್ಯದಲ್ಲಿ ಅಪೂರ್ವವಾಗಿ ಕಂಡು ಬರುವ ಕಾಫಿ ತೋಟ ಈಗ ಆಕರ್ಷಣೆಯ ಕೇಂದ್ರವಾಗಿದೆ.







