ಕಾಸರಗೋಡು: ಈ ತಿಂಗಳ 21ರಂದು ಪ್ರಮಾಣವಚನ ಸ್ವೀಕರಿಸುವ ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 26, 27ರಂದು ನಡೆಯಲಿದೆ. ನಗರಸಭೆಯ ಚೆಯರ್ ಪರ್ಸನ್ ಆಯ್ಕೆ 26ರಂದು ಬೆಳಿಗ್ಗೆ 10.30ಕ್ಕೆ, ಉಪಾಧ್ಯಕ್ಷರ ಆಯ್ಕೆ ಅಪರಾಹ್ನ 2.30ಕ್ಕೆ ನಡೆಯಲಿದೆ. ಗ್ರಾಮ ಪಂಚಾಯತ್, ಬ್ಲೋಕ್ ಪಂ., ಜಿಲ್ಲಾ ಪಂ. ಎಂಬಿವುಗಳ ಅಧ್ಯಕ್ಷರ ಆಯ್ಕೆ 27ರಂದು ಬೆಳಿಗ್ಗೆ 10.30ಕ್ಕೆ, ಉಪಾಧ್ಯಕ್ಷರ ಆಯ್ಕೆ ಅಪರಾಹ್ನ 2.30ಕ್ಕೆ ನಡೆಯಲಿದೆ. ಜಿಲ್ಲಾ ಪಂಚಾಯತ್ ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕಾರಿಗೆ ಹೊಣೆ ನೀಡಲಾಗಿದೆ. ಗ್ರಾಮ ಪಂಚಾಯತ್, ಬ್ಲೋಕ್ ಪಂ.ಗಳಲ್ಲಿ ಆಯಾ ಸಂಸ್ಥೆಗಳ ಆಡಳಿತಾಧಿಕಾರಿಗಳಿಗೆ ಹೊಣೆ ವಹಿಸಿಕೊಡಲಾಗಿದೆ. ನಗರಸಭೆಗಳಲ್ಲಿ ಚುನಾವಣಾಧಿಕಾರಿಗಳಿಗೆ ಪ್ರತ್ಯೇಕವಾಗಿ ಹೊಣೆ ನೀಡಲಾಗಿದೆ. ಆಯಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜರಗುವ ಸದಸ್ಯರ ಸಭೆಯಲ್ಲಿ ಅಭ್ಯರ್ಥಿಯನ್ನು ಓರ್ವರು ಸೂಚಿಸಬೇಕಾಗಿದ್ದು, ಇನ್ನೋರ್ವರು ಬೆಂಬಲಿಸಬೇಕಾಗಿದೆ. ಮೀಸಲಾತಿ ಮಾಡಿರುವ ಸಂಸ್ಥೆಗಳಲ್ಲಿ ಸ್ಪರ್ಧಿಸುವ ಓರ್ವ ಸದಸ್ಯನನ್ನು ಇನ್ನೋರ್ವ ಸೂಚಿಸಬೇಕಾಗಿಲ್ಲ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದ್ದರೆ ಮಾತ್ರವೇ ಮತದಾನವನ್ನು ಓಪನ್ ಬ್ಯಾಲೆಟ್ ಮೂಲಕ ನಡೆಸಲಾಗುವುದು.
ಚುನಾವಣೆ ಸಭೆಯಲ್ಲಿನ ಕ್ವಾರಂ ಸಂಬಂಧಪಟ್ಟ ಸಂಸ್ಥೆಗಳ ಸದಸ್ಯರ ಅರ್ಧವಾದರೂ ಇರಬೇಕಾಗಿದೆ. ಕ್ವಾರಂ ಭರ್ತಿಯಾಗದಿದ್ದರೆ ಸಭೆ ಮುಂದಿನ ಕೆಲಸದ ದಿನಕ್ಕೆ ಮುಂದೂಡಲಾಗುವುದು. ಇಬ್ಬರು ಅಭ್ಯರ್ಥಿಗಳು ಮಾತ್ರವಿದ್ದರೆ ಹೆಚ್ಚು ಮತಗಳನ್ನು ಗಳಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು. ಇಬ್ಬರಿಗೂ ಸಮಾನ ಮತಗಳು ಲಭಿಸಿದರೆ ಡ್ರಾ ನಡೆಸಲಾಗುವುದು. ಇಬ್ಬರಿಗಿಂತ ಹೆಚ್ಚು ಮಂದಿ ಸ್ಪರ್ಧಿಸುವುದಾದರೆ ಮತದಾನ ವೇಳೆ ಓರ್ವ ಅಭ್ಯರ್ಥಿಗೆ ಇತರ ಎಲ್ಲರಿಗೂ ಲಭಿಸಿದ ಮತಗಳನ್ನು ಕೂಡಿಸಿದಾಗಲೂ ಅದಕ್ಕಿಂತ ಹೆಚ್ಚು ಮತ ಲಭಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು. ಆದರೆ ಈ ಪ್ರಕಾರ ಓರ್ವ ಅಭ್ಯರ್ಥಿಗೂ ಮತ ಲಭಿಸದಿದ್ದರೆ ಅತ್ಯಂತ ಕಡಿಮೆ ಮತ ಲಭಿಸಿದ ಅಭ್ಯರ್ಥಿಯನ್ನು ಹೊರತುಪಡಿಸಿ ಮತ್ತೆ ಮತದಾನ ನಡೆಸಲಾಗುವುದು.







