ತಿರುವನಂತಪುರ: ಶಬರಿಮಲೆ ಕ್ಷೇತ್ರ ದರ್ಶನ ನಡೆಸಿ ಮರಳುವ ಭಕ್ತರ ವಾಹನಗಳು ಅಪಘಾತಕ್ಕೀಡಾಗುತ್ತಿರು ವುದು ಇತ್ತೀಚೆಗಿನಿಂದ ಹೆಚ್ಚಿರುವ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಲು ಪೊಲೀಸ್ ಇಲಾಖೆ ಕೆಲವು ನಿರ್ದೇಶಗಳನ್ನು ಹೊರಡಿಸಿದೆ. ಶಬರಿಮಲೆಯಿಂದ ಹಿಂತಿರುಗಿದ ಬಳಿಕ ದೀರ್ಘದೂರ ಪ್ರಯಾಣ ಹಾಗೂ ವಿಶ್ರಾಂತಿ ಇಲ್ಲದೆ ವಾಹನ ಓಡಿಸುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ವಾಹನಗಳಲ್ಲಿ ಹೆಚ್ಚುವರಿ ಚಾಲಕರನ್ನು ಸೇರಿಸಿಕೊಳ್ಳಬೇಕು. ಅದೇ ರೀತಿ ಅಗತ್ಯದಷ್ಟು ನಿದ್ದೆ ಹಾಗೂ ವಿಶ್ರಾಂತಿ ಪಡೆದ ಬಳಿಕವೇ ಪ್ರಯಾಣ ಮುಂದುವರಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.
ಕಠಿಣ ವ್ರತಾನುಷ್ಠಾನಗಳನ್ನು ಪಾಲಿಸಿ, ದೀರ್ಘದೂರ ಕಾಲ್ನಡೆಯಾಗಿ ಕ್ಷೇತ್ರ ದರ್ಶನ ನಡೆಸಿ ಮಲೆ ಇಳಿದಾಗ ಶಾರೀರಿಕ ಹಾಗೂ ಮಾನಸಿಕವಾಗಿ ಕ್ಷೀಣಿತರಾಗಿರುತ್ತಾರೆ. ಅದರ ಬೆನ್ನಲ್ಲೇ ದೀರ್ಘದೂರ ಪ್ರಯಾಣ ನಡೆಸುವುದು, ವಿಶ್ರಾಂತಿ ಇಲ್ಲದೆ ವಾಹನ ಚಲಾಯಿಸುವುದು ಗಂಭೀರ ಅಪಘಾತಗಳಿಗೆ ಕಾರಣವಾಗುತ್ತಿದೆ. ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಪೂರ್ಣ ಆರೋಗ್ಯವಾಗಿದ್ದರೆ ಮಾತ್ರವೇ ವಾಹನ ಚಲಾಯಿಸಬೇಕಾದುದು ಪ್ರತಿಯೊಬ್ಬ ಚಾಲಕನ ಪ್ರಧಾನ ಹೊಣೆಗಾರಿಕೆಯಾಗಿದೆ. ಸ್ವಂತ ಜೀವ ಮಾತ್ರವಲ್ಲ ಜತೆಗೆ ಪ್ರಯಾಣಿಸುವವರ ಜೀವದ ಬಗ್ಗೆಯೂ ಚಾಲಕರು ಜಾಗ್ರತೆ ಪಾಲಿಸಬೇಕಾಗಿದೆ.
ಪ್ರಯಾಣ ವೇಳೆ ಚಾಲಕ ನಿದ್ರಿಸದೆ ಇರಲು ಇತರರು ಎಚ್ಚರದಿಂದ ಇರಬೇಕಾಗಿದೆ. ಚಾಲಕನೊಂದಿಗೆ ಮಾತನಾಡುತ್ತಾ ಜಾಗ್ರತೆಯಲ್ಲಿರುವಂತೆ ಎಚ್ಚರಿಸಬೇಕಾಗಿದೆ. ಪ್ರಯಾಣ ವೇಳೆ ಆಯಾಸ ಉಂಟಾದಲ್ಲಿ ಕೂಡಲೇ ವಿಶ್ರಾಂತಿ ಪಡೆಯುವಂತೆ ತಿಳಿಸಬೇಕು. ಒಂದು ನಿಮಿಷದ ನಿರ್ಲಕ್ಷ್ಯ ಭಾರೀ ದುರಂತಗಳಿಗೆ ಕಾರಣವಾಗಲಿದೆ. ಆದ್ದರಿಂದ ಪ್ರಯಾಣ ವೇಳೆ ಅತೀವ ಜಾಗ್ರತೆ ಪಾಲಿಸಬೇಕಾಗಿದೆ ಎಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.







