ಕಾಸರಗೋಡು: ಕಳೆದ ಐದ ವರ್ಷದ ಹಿಂದೆ ಆರಂಭಗೊಳಿಸಿದ ಕಾಸರಗೋಡು ಎಂ.ಜಿ ರಸ್ತೆಯ ಪಳ್ಳಂ ಟ್ರಾಫಿಕ್ನಿಂದ ಹೊಸ ಬಸ್ ನಿಲ್ದಾಣದವರೆಗಿನ ಇಕ್ಕಡೆಗಳಲ್ಲೂ ಇರುವ ಕಾಲುದಾರಿಯ ಕಾಮಗಾರಿ ಪೂರ್ತಿಯಾಗದಿರುವುದನ್ನು ಪ್ರತಿಭಟಿಸಿ ಕಾಸರಗೋಡು ಚೇಂಬರ್ ಆಫ್ ಕಾಮರ್ಸ್ ರಾಜ್ಯ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಿಗೆ ದೂರು ನೀಡಿದೆ. ಜನಸಂದಣಿ ಇರುವ ಪೇಟೆಯಲ್ಲಿ ಜನರಿಗೆ ಭಯವಿಲ್ಲದೆ ನಡೆದು ಸಾಗಲು ಉಪಕಾರವಾಗುವಂತಹ ಕಾಲುದಾರಿ ಈಗ ಜನರಿಗೆ ಉಪಯೋಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ.
ಕೆಲವು ಕಡೆಗಳಲ್ಲಿ ಸಂರಕ್ಷಣಾ ಬೇಲಿಯೊಂದಿಗೆ ಕಾಲುದಾರಿ ಇದ್ದರೂ ಇನ್ನು ಕೆಲವು ಕಡೆಗಳಲ್ಲಿ ಸಂರಕ್ಷಣಾ ಬೇಲಿ ಇಲ್ಲದೆ ಕಾಲುದಾರಿ ನಿರ್ಮಿಸಲಾಗಿದೆ. ಇದೇ ರೀತಿ ಕೆಲವು ಕಡೆಗಳಲ್ಲಿ ಹಾಸಿದ ಟೈಲ್ಸ್ ಅಲುಗಾಡುತ್ತಿದ್ದು, ಕೆಲವು ಕಡೆಗಳಲ್ಲಿ ಇನ್ನೂ ಕೂಡಾ ಟೈಲ್ಸ್ ಹಾಸಲಿಲ್ಲ. ಕಾಲುದಾರಿ ಕೆಲಸ ಈಗ ಅಲ್ಲೋಲಕಲ್ಲೋಲಗೊಂಡಿದ್ದು, ಕೂಡಲೇ ಪೂರ್ತಿಗೊಳಿಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ರಿಗೆ ನೀಡಿದ ಮನವಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ಆಗ್ರಹಿಸಿದೆ.







