ಕಾಸರಗೋಡು: ಸೋಷ್ಯಲ್ ಮೀಡಿಯಾ ಮೂಲಕ ಶಾಂತಿ ಸಮಾಧಾನಕ್ಕೆ ಭಂಗವುಂಟಾಗುವ ರೀತಿಯಲ್ಲಿ ಸುಳ್ಳು ಸಂದೇಶಗಳನ್ನು ಪ್ರಚಾರ ಮಾಡಿದ ಆರೋಪದಂತೆ ಚೆರುವತ್ತೂರಿನ ಮಹಿಳಾ ಲೀಗ್ ನೇತಾರೆ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಡಕ್ಕರ ಮುಳಕ್ಕೀಲ್ ನಿವಾಸಿ ಇ.ವಿ. ಶಾಜಿ ಎಂಬವರು ನೀಡಿದ ದೂರಿನಂತೆ ನಫೀಸ ಪೂಮಾಡತ್ತ್ ವಿರುದ್ಧ ಕೇಸು ದಾಖಲಿಸಲಾಗಿದೆ. ನಫೀಸ ಚೆರುವತ್ತೂರು ಗ್ರಾಮ ಪಂಚಾಯತ್ 2ನೇ ವಾರ್ಡ್ ಯುಡಿಎಫ್ ಅಭ್ಯರ್ಥಿಯಾಗಿದ್ದರು. ಈ ತಿಂಗಳ 13ರಂದು ಮತ ಎಣಿಕೆ ನಡೆದ ಬೆನ್ನಲ್ಲೇ ಚೆರುವತ್ತೂರು ಮಡಕ್ಕರದಲ್ಲಿ ಮುಸ್ಲಿಂ ಲೀಗ್- ಸಿಪಿಎಂ ಮಧ್ಯೆ ಘರ್ಷಣೆ ನಡೆದಿತ್ತು. ಈ ಮಧ್ಯೆ ತುರುತ್ತಿಯ ಮಸೀದಿಗೆ ಆಕ್ರಮಿಸಲಾಗಿದೆ ಎಂಬ ಸುಳ್ಳು ಪ್ರಚಾರವನ್ನು ನಫೀಸ ವಾಟ್ಸಪ್ ಮೂಲಕ ಪ್ರಚಾರಗೈದಿರುವುದಾಗಿ ದೂರಲಾಗಿದೆ. ಸುಳ್ಳು ಪ್ರಚಾರದ ವಿರುದ್ಧ ತುರುತ್ತಿ ಜಮಾಅತ್ ಕಮಿಟಿ ರಂಗಕ್ಕಿಳಿದಿತ್ತು.







