ಪೆರ್ಲ: ಕೆಎಸ್ಆರ್ಟಿಸಿ ಬಸ್ ನಲ್ಲಿ ಗಾಂಜಾ ಸಹಿತ ಪ್ರಯಾಣಿಸುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಕಾಟುಕುಕ್ಕೆ ಪೆರ್ಲತ್ತಡ್ಕ ನಿವಾಸಿ ಅಬ್ದುಲ್ ಸಮದ್ (37) ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ಮಂಜೇಶ್ವರ ಅಬಕಾರಿ ಚೆಕ್ಪೋಸ್ಟ್ನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಈತ ಸೆರೆಗೀಡಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಅಬ್ದುಲ್ ಸಮದ್ ಪ್ರಯಾಣಿಸುತ್ತಿದ್ದನು. ಈತನ ಕೈಯಲ್ಲಿ 12 ಗ್ರಾಂ ಗಾಂಜಾ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಟುಕುಕ್ಕೆಯ ಶಾಲಾ ಮಕ್ಕಳಿಗೆ ಹಾಗೂ ಪೆರ್ಲದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ನಡೆಸುತ್ತಿರುವುದಾಗಿ ಈತ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆಂದು ಅಧಿಕಾರಿ ಗಳು ತಿಳಿಸಿದ್ದಾರೆ. ಅಬಕಾರಿ ಇನ್ಸ್ಪೆಕ್ಟರ್ ಸಿ. ಸಂತೋಷ್ ಕುಮಾರ್ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ ಎ.ಕೆ. ನಸರುದ್ದೀನ್, ಪ್ರಿವೆಂಟಿವ್ ಆಫೀಸರ್ (ಸಿ ಗ್ರೇಡ್) ವಿಜಯನ್, ಕೆ. ಪ್ರಜಿತ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್ ಎ.ಬಿ) ಅಬ್ದುಲ್ಲ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ. ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಯಂಗವಾಗಿ ಹಮ್ಮಿಕೊಂಡ ಸ್ಪೆಷಲ್ ಡ್ರೈವ್ ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.







