ಬೋವಿಕ್ಕಾನ: ಸಾರ್ವಜನಿಕರಿಗೆ ಹಾಗೂ ದೀರ್ಘದೂರ ಪ್ರಯಾಣಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಬೀದಿಬದಿ ವಿಶ್ರಾಂತಿ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆದರೆ ಈಗ ಆ ಕೇಂದ್ರಗಳು ನಿರುಪಯುಕ್ತವಾಗಿ ಬದಲಾಗಿದೆ. ಕಾರಡ್ಕ ಬ್ಲೋಕ್ ಪಂ.ನ ವತಿಯಿಂದ ಪೊವ್ವಲ್ ಬೆಂಚ್‌ಕೋರ್ಟ್ ಹತ್ತಿರ ೨೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ರೀತಿಯ ವಿಶ್ರಾಂತಿ ಕೇಂದ್ರವೊಂದು ಈಗ ಬೀಗ ಜಡಿದ ರೀತಿಯಲ್ಲಿ ಕಂಡು ಬರುತ್ತಿದೆ. ೨೦೨೪ ಡಿಸೆಂಬರ್ ತಿಂಗಳಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲಾಗಿತ್ತು. ಚೆರ್ಕಳ- ಜಾಲ್ಸೂರು ರಸ್ತೆಯ ಪೊವ್ವಲ್ ಬಳಿ ನಿರ್ಮಿಸಿದ ಈ ವಿಶ್ರಾಂತಿ ಕೇಂದ್ರದ ಪರಿಸರದಲ್ಲಿ ವಾಹನಗಳಿಗೆ ನಿಲುಗಡೆಗೊಳಿಸಲು ಸೂಕ್ತ ಸ್ಥಳವಿದ್ದು, ಪ್ರಯಾಣಿಕರಿಗೆ ವಿಶ್ರಾಂತಿಗೆ ಅನುಕೂಲವಾಗುತ್ತಿತ್ತು. ದಿನಂಪ್ರತಿ ನೂರಾರು ವಾಹನಗಳು ಸಾಗುವ ಈ ರಸ್ತೆಯಲ್ಲಿ ಆರಂಭಿಸಿದ ವಿಶ್ರಾಂತಿ ಕೇಂದ್ರದಲ್ಲಿ ಹೋಟೆಲ್ ಸಹಿತ ವಿವಿಧ ಸೌಕರ್ಯಗಳನ್ನು ಏರ್ಪಡಿಸಲಾಗಿತ್ತು.
ಚಂದ್ರಗಿರಿ ಇಕೋ ಟೂರಿಸಂ ಡೆವಲಪ್‌ಮೆಂಟ್ ಕೋ-ಆಪರೇಟಿವ್ ಸೊಸೈಟಿಗೆ ಈ ಕೇಂದ್ರವನ್ನು ಮುನ್ನಡೆಸಲು ಬ್ಲೋಕ್ ಪಂಚಾಯತ್ ಹೊಣೆ ನೀಡಿತ್ತು. ಪ್ರತೀ ತಿಂಗಳು 6೦೦೦ ರೂ. ಬಾಡಿಗೆ ರೂಪದಲ್ಲಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ೬ ಲಕ್ಷ ರೂ. ವೆಚ್ಚ ಮಾಡಿ ಸೊಸೈಟಿ ಇಲ್ಲಿ ಹೋಟೆಲ್‌ಗೆ ಬೇಕಾದ ಉಪಕರಣಗಳು ಹಾಗೂ ಇತರ ಸಿದ್ಧತೆಯನ್ನು ಕೂಡಾ ನಡೆಸಿತ್ತು. ೨೪ ಗಂಟೆಯೂ ತೆರೆದು ಕಾರ್ಯಾಚರಿಸುವ ರೀತಿಯಲ್ಲಿ ಈ ವಿಶ್ರಾಂತಿ ಕೇಂದ್ರ ಕಾರ್ಯಾಚರಿಸಲಿದೆ ಎಂದು ಉದ್ಘಾಟನೆ ವೇಳೆ ಅಧಿಕಾರಿಗಳು ತಿಳಿಸಿದ್ದರು. ಸಂಘದ ಅಧೀನದಲ್ಲಿರುವ ಪೊಲಿಯಂತುರ್ತ್ ಇಕೋ ಟೂರಿಸಂನ ನೌಕರರನ್ನು ಬಳಸಿಕೊಂಡು ಇಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿತ್ತು. ಆದರೆ ಈ ಸೊಸೈಟಿ ಬಳಿಕ ಓರ್ವ ವ್ಯಕ್ತಿಗೆ ವಿಶ್ರಾಂತಿ ಕೇಂದ್ರದ ಹೊಣೆಯನ್ನು ನೀಡಿ ಒಳ ಒಪ್ಪಂದ ಮಾಡಿಕೊಂಡಿತ್ತು. ಈ ವ್ಯಕ್ತಿ ಸುಮಾರು ಒಂದು ತಿಂಗಳ ಕಾಲ ಈ ಕೇಂದ್ರದಲ್ಲಿ ಚಟುವಟಿಕೆಯನ್ನು ನಡೆಸಿದ್ದು, ಈಗ ಕಳೆದ ಮೂರು ವಾರದಿಂದ ಬೀಗ ಜಡಿದ ಸ್ಥಿತಿಯಲ್ಲಿ ಕಂಡು ಬರುತ್ತಿದೆ.
ದೀರ್ಘದೂರ ಪ್ರಯಾಣಿಕರಿಗೆ ಹೆಚ್ಚು ಸೌಕರ್ಯಪ್ರದವಾಗುತ್ತಿದ್ದ ಈ ವಿಶ್ರಾಂತಿ ಕೇಂದ್ರವನ್ನು ಶೀಘ್ರವೇ ತೆರೆಯಬೇಕೆಂದು ಸ್ಥಳೀಯರು ಕೂಡಾ ಆಗ್ರಹಿಸಿದ್ದಾರೆ. ಇದೇ ವೇಳೆ ಮುಂದಿನ ತಿಂಗಳ ಮೊದಲ ವಾರದಲ್ಲೇ ಇದನ್ನು ತೆರೆದು ಕಾರ್ಯಾಚರಿಸುವಂತೆ ಮಾಡಲಾಗುವುದೆಂದು ಕಾರಡ್ಕ ಬ್ಲೋಕ್ ಪಂಚಾಯತ್ ಮಾಜಿ ಅಧ್ಯಕ್ಷ ಸಿಜಿ ಮ್ಯಾಥ್ಯು ತಿಳಿಸಿದ್ದಾರೆ. ಇದೇ ರೀತಿ ಚೆಂಗಳ ಪಂಚಾಯತ್ ವತಿಯಿಂದ ಚೆರ್ಕಳದಲ್ಲಿ ನಿರ್ಮಿಸಿದ ಟೇಕ್ ಎ ಬ್ರೇಕ್ ಕಟ್ಟಡ ಕೂಡಾ ಉಪಯೋಗಶೂನ್ಯವಾಗಿ ಚೆರ್ಕಳ ಪೇಟೆಯಲ್ಲಿ ಕಂಡು ಬರುತ್ತಿದೆ.






