ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಚಿನ್ನವನ್ನು ಕರಗಿಸಿ ತೆಗೆದ ಹಾಗೂ ಬಳಿಕ ಅದನ್ನು ಪಡೆದ ಇಬ್ಬರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನದ ಕವಚಗಳ ಚಿನ್ನವನ್ನು ಕರಗಿಸಿ ಬೇರ್ಪಡಿಸಿದ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯ ಸಿಇಒ ಪಂಕಜ್ ಭಂಡಾರಿ ಹಾಗೂ ಆ ಚಿನ್ನವನ್ನು ಬಳಿಕ ಪಡೆದ ಕರ್ನಾಟಕ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲಕ ಗೋವರ್ಧನ್ ಬಂಧಿತರಾದ ಆರೋಪಿಗಳು. ಆರೋಪಿಗಳ ಪೈಕಿ ಗೋವರ್ಧನ್‌ನ ಚಿನ್ನದಂಗಡಿಯಿಂದ ತನಿಖಾ ತಂಡ 480 ಗ್ರಾಂ ಚಿನ್ನ ವಶಪಡಿಸಿಕೊಂಡಿದೆ. ಶಬರಿಮಲೆಯ ಚಿನ್ನ ಕಳವು ಪ್ರಕರಣದ ಮುಖ್ಯ ಸೂತ್ರಧಾರ ಹಾಗೂ ಈ ಪ್ರಕರಣದ ಒಂದನೇ ಆರೋಪಿಯೂ ಆಗಿರುವ ಉಣ್ಣಿಕೃಷ್ಣನ್ ಪೋತ್ತಿಯ ಮಧ್ಯಸ್ಥಿಕೆಯಲ್ಲಿ ಚಿನ್ನದಂಗಡಿ ಮಾಲಕ ಗೋವರ್ಧನ್ ಚಿನ್ನ ಪಡೆದಿದ್ದನು. ಮಾತ್ರವಲ್ಲ ಪೋತ್ತಿಯೇ ನೇರವಾಗಿ ಶಬರಿಮಲೆ ದೇಗುಲದ ಚಿನ್ನದ ಕವಚಗಳನ್ನು ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್‌ಗೆ ಸಾಗಿಸಿದ್ದನು. ಅದು ಶಬರಿಮಲೆಯ ಚಿನ್ನವಾಗಿತ್ತೆಂಬುವುದನ್ನು ಪಂಕಜ್ ಭಂಡಾರಿ ತಿಳಿದಿದ್ದರೂ ತನಿಖೆಯ ವೇಳೆ ಮೊದಲು ಆತ ಅದನ್ನು ಮರೆಮಾಚಿ ಅದು ಕೇವಲ ತಾಮ್ರದ ಕವಚಗಳಾಗಿದೆಯೆಂಬ ಹೇಳಿಕೆಯನ್ನು ನೀಡಿದ್ದನೆಂದು ತನಿಖಾ ತಂಡ ಹೇಳಿದೆ.
ಇದೇ ಸಂದರ್ಭದಲ್ಲಿ ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆ ಮಂದಗತಿಯಲ್ಲಿ ನಡೆಸುತ್ತಿರುವ ವಿಶೇಷ ತನಿಖಾ ತಂಡದ ನಿಲುವನ್ನು ರಾಜ್ಯ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದ ತನಿಖೆ ಡಿಸೆಂಬರ್ ೫ರಿಂದ ಸ್ತಂಭನಗೊಂಡಿ ದ್ದಾದರೂ ಯಾತಕ್ಕಾಗಿ? ಅದರ ಹಿನ್ನೆಲೆ ಏನು ಎಂದೂ ತನಿಖಾ ತಂಡವನ್ನು ನ್ಯಾಯಾಲಯ ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳು ಚಿನ್ನದ್ದಾಗಿದೆಯೆಂಬ ಹೆಸರಲ್ಲಿ ಅದನ್ನು ಹಸ್ತಾಂತರಿಸಲು ಅನುಮತಿ ನೀಡಿದ್ದ ತಿರುವಿದಾಂಕೂರು ದೇವಸ್ವಂ ಮಂಡಳಿಯ ಸದಸ್ಯರುಗಳಾಗಿದ್ದ ನ್ಯಾಯವಾದಿ ವಿಜಯ ಕುಮಾರ್ ಮತ್ತು ಕೆ.ಟಿ. ಶಂಕರ್‌ದಾಸ್‌ರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರ್ಪಡೆಗೊಳಿಸದೇ ಇರುವುದು ಹಾಗೂ ಈತನಕ ಅವರನ್ನು ಬಂಧಿಸದಿರುವುದಾದರೂ ಯಾತಕ್ಕಾಗಿ ಎಂದು ಪ್ರಶ್ನಿಸಿದ ನ್ಯಾಯಾಲಯ ಇದು ಒಂದು ದಂಗುಬಡಿಸುವ ಸಂಗತಿ ಯಾಗಿದೆ. ಮಾತ್ರವಲ್ಲ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಈಗ ನ್ಯಾಯಾಂಗ ಬಂಧನದಲ್ಲಿರುವ ಇತರ ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳನ್ನೂ ಹೈಕೋರ್ಟ್ ತಿರಸ್ಕರಿಸಿದೆ.
ಇದೇ ಸಂದರ್ಭದಲ್ಲಿ ವಿಶೇಷ ತನಿಖಾ ತಂಡ ಈತನಕ ನಡೆಸಿದ ತನಿಖಾ ವರದಿಗಳ ದೃಢೀಕೃತ ಪ್ರತಿ ಗಳನ್ನು ಎನ್‌ಫೋರ್ಸ್ ಡೈರೆಕ್ಟರೇಟ್ (ಇಡಿ)ಗೆ ಹಸ್ತಾಂತರಿಸುವಂತೆ ಇನ್ನೊಂದೆಡೆ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯ ವಿಶೇಷ ತನಿಖಾ ತಂಡಕ್ಕೆ ನಿರ್ದೇಶ ನೀಡಿದೆ.







