ಮಹಿಳೆಯರಿಗೆ ತಿಂಗಳಿಗೆ 1000 ರೂ. ನೀಡುವ ಸ್ತ್ರೀ ಸುರಕ್ಷಾ ಯೋಜನೆ: ಇಂದಿನಿಂದ ಅರ್ಜಿ ಸ್ವೀಕಾರ

ತಿರುವನಂತಪುರ: ರಾಜ್ಯದ ಮಹಿಳೆಯರ ಕ್ಷೇಮ ಖಚಿತಪಡಿಸಲು ರಾಜ್ಯ ಸರಕಾರ ಘೋಷಿಸಿದ ಸ್ತ್ರೀ ಸುರಕ್ಷಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಇಂದಿನಿಂದ ಸ್ಥಳೀಯಾಡಳಿತ ಸಂಸ್ಥೆ ಇಲಾಖೆಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ksmart.lsgkerala.gov.in ಎಂಬ ವೆಬ್‌ಸೈಟ್ ಮೂಲಕ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಪ್ರಸ್ತುತ ರಾಜ್ಯದ ಯಾವುದೇ ಇತರ ಪಿಂಚಣಿಗಳನ್ನು ಪಡೆಯದ ಮಹಿಳೆಯರು ತಿಂಗಳಿಗೆ 1000 ರೂ.ನಂತೆ ಧನಸಹಾಯ ಅರ್ಹರಾಗಿದ್ದಾರೆ ಎಂದು ಸ್ಥಳೀಯಾಡಳಿತ ಇಲಾಖೆ ಪ್ರಿನ್ಸಿಪಲ್ ಡೈರೆಕ್ಟರ್ ತಿಳಿಸಿದ್ದಾರೆ. ಕೇರಳದಲ್ಲಿ ಖಾಯಂ ವಾಸವಾಗಿರುವ ೩೫ರಿಂದ 60ರ ಮಧ್ಯೆ ಪ್ರಾಯದ ಮಹಿಳೆಯರು, ಟ್ರಾನ್ಸ್ ವುಮೆನ್ ವಿಭಾಗಕ್ಕೊಳಪಟ್ಟವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಂತ್ಯೋದಯ ಅನ್ನ ಯೋಜನೆ (ಹಳದಿ ಕಾರ್ಡ್), ಆದ್ಯತಾ ವಿಭಾಗ (ಪಿಂಕ್ ಕಾರ್ಡ್) ಎಂಬೀ ರೇಶನ್ ಕಾರ್ಡ್ ಇರುವವರಿಗೆ ಅರ್ಜಿ ಸಲ್ಲಿಸಲು ಅರ್ಹತೆ ಇದೆ. ವಿಧವಾ ಪಿಂಚಣಿ, ಅವಿವಾಹಿತ ಪಿಂಚಣಿ, ಅಂಗವಿಕಲ ಪಿಂಚಣಿ ಎಂಬಿವುಗಳ ಹೊರತು ವಿವಿಧ ಸೇವಾ ಪಿಂಚಣಿಗಳು, ಕುಟುಂಬ ಪಿಂಚಣಿ, ಇಪಿಎಫ್ ಪಿಂಚಣಿ ಎಂಬಿವುಗಳು ಲಭಿಸುವವರು ಈ ಯೋಜನೆಯ ಸೌಲಭ್ಯಕ್ಕೆ ಅರ್ಹರಲ್ಲ. ಕೇಂದ್ರ, ರಾಜ್ಯ ಸರಕಾರದ  ನೌಕರರು, ಸರಕಾರಿ ಮಾಲಕತ್ವದ ಸಂಸ್ಥೆಗಳಲ್ಲಿ, ವಿ.ವಿ.ಗಳಲ್ಲಿ ಖಾಯಂ ಅಥವಾ ಕರಾರು ಆಧಾರದಲ್ಲಿ ಕೆಲಸ ಮಾಡುವವರು ಈ ಯೋಜನೆಗೆ ಅರ್ಹರಲ್ಲ.

ಅರ್ಜಿ ಸಲ್ಲಿಸಲು ಪ್ರಾಯ ದೃಢೀಕರಿಸುವ ಜನನ ಪ್ರಮಾಣ ಪತ್ರ, ಶಾಲಾ ಪ್ರಮಾಣಪತ್ರ, ಡ್ರೈವಿಂಗ್ ಲೈಸನ್ಸ್, ಪಾಸ್‌ಪೋರ್ಟ್ ಎಂಬಿವುಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಬೇಕು. ಬ್ಯಾಂಕ್ ಖಾತೆ ಮಾಹಿತಿಗಳು, ಐಎಫ್‌ಎಸ್‌ಸಿ ಕೋಡ್, ಆಧಾರ್ ಮಾಹಿತಿಗಳು ಎಂಬಿವು ಅರ್ಜಿಯ ಜೊತೆಗೆ ಸಲ್ಲಿಸಬೇಕು. ಅರ್ಜಿಯ ಜೊತೆಗೆ ಸ್ವಯಂ ದೃಢೀಕರಿಸಿದ ಸತ್ಯಪ್ರತಿಜ್ಞೆ ಒಳಪಡಿಸಬೇಕು. ಸೌಲಭ್ಯ ಲಭಿಸುವವರು ಪ್ರತೀ ವರ್ಷ ಆಧಾರ ಆಧಾರಿತವಾಗಿ ವಾರ್ಷಿಕ ಮಸ್ಟರಿಂಗ್ ನಡೆಸಬೇಕು. ಫಲಾನುಭವಿ ಮೃತಪಟ್ಟರೆ ಈ ಸೌಲಭ್ಯವನ್ನು ಹಕ್ಕುದಾರರಿಗೆ ಹಸ್ತಾಂತರಿಸಲು ವ್ಯವಸ್ಥೆ ಇಲ್ಲ. ಫಲಾನುಭವಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿರುವುದು, ರಿಮಾಂಡ್‌ನಲ್ಲಿರುವುದು ಇದ್ದರೆ ಆ ಕಾಲಾವಧಿಯಲ್ಲಿ ಧನ ಸಹಾಯ ಲಭಿಸುವುದಿಲ್ಲ. ತಪ್ಪಾದ ಮಾಹಿತಿಗಳನ್ನು ನೀಡಿ ಸೌಲಭ್ಯ ಸ್ವೀಕರಿಸಿರುವುದು ಗಮನಕ್ಕೆ ಬಂದರೆ ೧೮ ಶೇಕಡಾ ಬಡ್ಡಿ ಸಹಿತ ಮೊತ್ತವನ್ನು ಹಿಂಪಡೆಯಲು ವ್ಯವಸ್ಥೆ ಇದೆ ಎಂದು ಪ್ರಿನ್ಸಿಪಲ್ ಡೈರೆಕ್ಟರ್ ತಿಳಿಸಿದ್ದಾರೆ.

RELATED NEWS

You cannot copy contents of this page