ಮುಳ್ಳೇರಿಯ: ತುಳು ಭಾಷಿಗರ ಹಲವು ಕಾಲದ ಬೇಡಿಕೆಯಾದ ಸಂವಿಧಾನದ ೮ನೇ ಪರಿಚ್ಛೇಧದ ಸೇರ್ಪಡೆಗೆ ಪಾರ್ಲಿಮೆಂಟ್‌ನಲ್ಲಿ ಪ್ರಸ್ತಾಪ ನಡೆಸಿದ್ದು, ಮುಂದೆಯೂ ಅದಕ್ಕಾಗಿ ತೀವ್ರ ಯತ್ನ ನಡೆಸುವೆನೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನುಡಿದರು. ಅವರು ಮುಂಡೋಳು ಕ್ಷೇತ್ರದ ಸಭಾ ಭವನದಲ್ಲಿ ನಡೆದ ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಕಾರಡ್ಕ ಸಂಭ್ರಮ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ಶಿಷ್ಯರ ರಂಗಪ್ರವೇಶ, ಗುರುವಂದನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪುರಾಣ ಕತೆಗಳ ಮೂಲಕ ಭಕ್ತಿ ಪ್ರಧಾನ ಸಂಸ್ಕೃತಿ ಬೆಳೆಸುವ ಯಕ್ಷಗಾನ ಕಲೆಯನ್ನು ತಲೆಮಾರುಗಳಿಗೆ ಹಸ್ತಾಂತರಿಸಲು ಕಾರಡ್ಕ ಫೌಂಡೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಯ ಶ್ಲಾಘನೀಯವೆಂದು ಟ್ರಸ್ಟ್ ಸ್ಥಾಪಕ ರಾಘವ ಬಲ್ಲಾಳ್ ಕಾರಡ್ಕ ದಂಪತಿಯನ್ನು ಗೌರವಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರಡ್ಕ ಪ್ರಶಸ್ತಿ ಸ್ವೀಕರಿಸಿದ ಕೇರಳ ಕಲಾ ಮಂಡಲಂ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಆರ್.ಎಲ್.ವಿ ರಾಮಕೃಷ್ಣನ್ ಮಾತನಾಡಿ ಕಲೆಗೆ ಭೇದ ಭಾವವಿಲ್ಲ. ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ಕಲೆ ಜನರನ್ನು ಒಂದುಗೂಡಿಸಲು ಸಹಾಯಕವಾಗಿದೆ. ಯಕ್ಷಗಾನದ ನಾಟ್ಯ, ವೇಷ, ಹಾವಭಾವಗಳನ್ನು ಕಥಕ್ಕಳಿ, ಮೋಹಿನಿ ಯಾಟ್ಟಂಗಳಲ್ಲೂ ಕಾಣಬಹುದಾಗಿದ್ದು, ನಾನಾತ್ವದಲ್ಲಿ ಏಕತೆ ಇದರಲ್ಲಿದೆ ಎಂದರು. ಆಚಾರ, ಸಂಸ್ಕೃತಿಗಳು ಕಲೆಯಿಂದ ಬೆಳೆದು ಬರುತ್ತಿದ್ದು, ಈ ಪ್ರದೇಶದ ಜನರಿಗೆ ಕಲೆಯ ಮೇಲಿರುವ ಪ್ರೀತಿ ನನ್ನನ್ನು ಸಂತೋಷಗೊಳಿಸಿದೆ ಎಂದ ಅವರು ಜನಪದ ಹಾಡೊಂದನ್ನು ಹಾಡಿ ರಂಜಿಸಿದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ ಕಲೆಯನ್ನು ಅನುಸರಿಸಬೇಕು. ಆದರೆ ಅನುಕರಿಸ ಬಾರದು. ಯಕ್ಷಗಾನವು ಎಲ್ಲಾ ವಿಭಾಗದ ಜನರನ್ನು ಆಕರ್ಷಿಸುವ ಕಲೆಯಾಗಿದ್ದು, ಗುರುಗಳ ಮೂಲಕ ಅದನ್ನು ಕಲಿತು ತಲೆಮಾರುಗಳಿಗೆ ಯಕ್ಷಗಾನ ಕಲೆಯನ್ನು ಹಸ್ತಾಂತರಿಸಬೇಕಾಗಿದೆ. ಕಲೆಯಲ್ಲಿ ತೊಡಗಿಸಿಕೊಂಡರೆ ದುಶ್ಚಟಗಳಿಂದ ಮುಕ್ತವಾಗಲು ಸಹಾಯವಾಗುತ್ತದೆ ಎಂದು ಅವರು ನುಡಿದರು. ಈ ಕಲೆಯನ್ನು ತಲೆಮಾರುಗಳಿಗೆ ಹಸ್ತಾಂತರಿ ಸಲು ರಾಘವ ಬಲ್ಲಾಳ್ ನಡೆಸುತ್ತಿರುವ ಕಾರ್ಯ ಶ್ಲಾಘನೀಯವೆಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಹನುಮಗಿರಿ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ ಅಧ್ಯಕ್ಷತೆ ವಹಿಸಿದರು. ಡಾ| ಶ್ರೀನಿಧಿ ಸರಳಾಯ, ಶ್ಯಾಮರಾಜ್ ಎಡನೀರು ಶುಭ ಕೋರಿದರು. ಮುಂಡೋಳು ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ್ ಬಲ್ಲಾಳ್, ಟ್ರಸ್ಟ್‌ನ ಅಧ್ಯಕ್ಷ ಸತ್ಯನಾರಾಯಣ ಕೇಕುಣ್ಣಾಯ, ಪುಂಡೂರು ವಾಮದೇವ ಪುಣಿಂಚಿತ್ತಾಯ, ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಹಿಮ್ಮೇಳ ವಾದಕ ಲಕ್ಷ್ಮೀಶ ಅಮ್ಮಣ್ಣಾಯ, ಟ್ರಸ್ಟ್‌ನ ಅಧ್ಯಕ್ಷ ರಾಘವ ಬಲ್ಲಾಳ್ ಕಾರಡ್ಕ, ಯೋಧ ಸುಬ್ರಾಯ ಬಲ್ಲಾಳ್ ಚಿಪ್ಪಾರುಬೀಡು, ಉಪಸ್ಥಿತರಿದ್ದರು. ಉದಯಕುಮಾರ್ ಸ್ವರ್ಗ ಸ್ವಾಗತಿಸಿ, ವಂದಿಸಿದರು. ಯತೀಶ್ ಕುಮಾರ್ ರೈ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪುತ್ತಿಗೆ ರಘುರಾಮ ಹೊಳ್ಳರಿಗೆ ಲಕ್ಷ್ಮಿ ಅಮ್ಮ ಚಂದ್ರಬಲ್ಲಾಳ್ ಪ್ರಶಸ್ತಿ, ಲಕ್ಷ್ಮೀಶ ಅಮ್ಮಣ್ಣಾಯರಿಗೆ ನಾಯಿತ್ತೋಡು ಮಾಧವ ಭಟ್ ಪ್ರಶಸ್ತಿ, ನಿವೃತ್ತ ಯೋಧ ಸುಬ್ರಾಯ ಬಲ್ಲಾಳ್ ಚಿಪ್ಪಾರುಬೀಡು, ನಿವೃತ್ತ ಕಮಾಂಡೊ ಶ್ಯಾಮರಾಜ ಎಡನೀರು ಇವರಿಗೆ ಕಾರಡ್ಕ ಶೌರ್ಯ ಪ್ರಶಸ್ತಿ, ಡಾ. ಆರ್.ಎಲ್.ವಿ. ರಾಮಕೃಷ್ಣನ್‌ರಿಗೆ ಕಾರಡ್ಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದೇ ವೇಳೆ ಎ.ಬಿ. ರಘುರಾಮ ಬಲ್ಲಾಳ್, ಎ.ಬಿ. ರಾಧಾಕೃಷ್ಣ ಬಲ್ಲಾಳ್, ನಾರಾಯಣ ಮಣಿಯಾಣಿ ಮುಳ್ಳೇರಿಯ, ಯತೀಶ್ ಕುಮಾರ್ ರೈ, ಉದಯ ಸ್ವರ್ಗ ಇವರನ್ನು ಅಭಿನಂದಿಸಲಾಯಿತು. ಮಕ್ಕಳಿಂದ ಪೂರ್ವರಂಗ ಹಾಗೂ ಬಾಲಕೃಷ್ಣ ಏಳ್ಕಾನ ಇವರ ನೇತೃತ್ವದಲ್ಲಿ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಪ್ರದರ್ಶನಗೊಂಡಿತು.







