ತಿರುವನಂತಪುರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೃತ ವ್ಯಕ್ತಿಯೊಬ್ಬರ ಚರ್ಮವನ್ನು ದಾನ ಮಾಡಿದ ಘಟನೆ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ರಸ್ತೆ ಅಪಘಾತದಿಂದಾಗಿ ಮೆದುಳಿನ ಆಘಾತ ಸಂಭವಿಸಿ ಮೃತಪಟ್ಟ ಕೊಲ್ಲಂ ಚಿರಯ್ಕರ ಇಡವಟ್ಟ ನಿವಾಸಿಯಾದ 46ರ ಹರೆಯದ ವ್ಯಕ್ತಿಯೊಬ್ಬರ ಚರ್ಮವನ್ನು ಕುಟುಂಬ ದಾನ ಮಾಡಲು ಮುಂದಾ ಗಿದೆ. ಹೀಗೆ ದಾನವಾಗಿ ಲಭಿಸುವ ಚರ್ಮವನ್ನು ಮಾರಕವಾಗಿ ಸುಟ್ಟು ಗಾಯಗೊಳ್ಳುವವರ ಸಹಿತ ಚರ್ಮ ಅಗತ್ಯವುಳ್ಳವರಿಗೆ ಅಳವಡಿಸುವ ಮೂಲಕ ಅವರ ಜೀವ ರಕ್ಷಿಸಲು ಸಾಧ್ಯವಿದೆ. ಚರ್ಮ ಸಂಗ್ರಹಿಸಿ ಭದ್ರವಾಗಿರಿಸುವ ಸ್ಕಿನ್ ಬ್ಯಾಂಕ್ ವ್ಯವಸ್ಥೆಯನ್ನು ಕಳೆದ ಸೆಪ್ಟಂಬರ್‌ನಲ್ಲೇ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರೂ, ಬೇನ್ಸ್‌ಸ್ಟೇಟ್ ನೋಡಲ್ ಆಫೀಸರ್ ಆಗಿರುವ ಡಾ| ಪ್ರೇಂಲಾಲ್‌ರ ನೇತೃತ್ವದ ಲ್ಲಿರುವ ತಜ್ಞರ ತಂಡ ಒಂದೂವರೆ ಗಂಟೆ ಕಾಲ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಮೃತ ವ್ಯಕ್ತಿಯ ತೊಡೆಯ ಹಿಂಭಾಗದಿಂದ ಚರ್ಮ ತೆಗೆಯಲಾಗಿದೆ. ವ್ಯಕ್ತಿ ಮೃತಪಟ್ಟ ಬಳಿಕ ಆರ ಗಂಟೆಯೊಳಗೆ ಚರ್ಮ ತೆಗೆಯಬೇಕಾಗಿದೆ. ಇದನ್ನು ಅತೀ ಭದ್ರತೆಯಿಂದಿರಿಸಲಾಗುವುದು. ಮೂರು ವಾರಗಳ ಕೆಮಿಕಲ್ ಪ್ರೊಸೆಸಿಂಗ್‌ನ ಬಳಿಕ ಅಗತ್ಯವುಳ್ಳ ರೋಗಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮೂಲಕ ನೂತನ ತಂತ್ರಜ್ಞಾನವನ್ನು ಬಳಸಿ ಅಳವಡಿಸಲಾಗುವುದು.







