ಎಣ್ಮಕಜೆ ಪಂ. ನಲ್ಲಿ ಲೀಗ್ ಪದಾಧಿಕಾರಿಗಳ ರಾಜೀನಾಮೆಯನ್ನು ತಿರಸ್ಕರಿಸಿದ ಮಂಡಲ ಸಮಿತಿ: ಮುಂದುವರಿಯುತ್ತಿರುವ ವಿವಾದ

ಪೆರ್ಲ: ಎಣ್ಮಕಜೆ ಪಂಚಾಯತ್ ಮುಸ್ಲಿಂ ಲೀಗ್ ಪದಾಧಿಕಾರಿಗಳ ರಾಜೀನಾಮೆಯನ್ನು ಮಂಡಲ ಸಮಿತಿ ತಿರಸ್ಕರಿಸಿದೆ. ವಿಧಾನಸಭಾ ಚುನಾವಣೆ ಸಮೀಪದಲ್ಲೇ ಇರುವಾಗ ವಿವಾದಗಳಿಂದ ದೂರ ನಿಲ್ಲಲು ಹಾಗೂ ಸಂಘಟನೆಯನ್ನು ಬಲಪಡಿಸಲಿರುವ ಕ್ರಮಗಳಿಗೆ ಮುಂದಾಗಬೇಕೆಂದು ಪಕ್ಷದ ನೇತೃತ್ವ ಪಂಚಾಯತ್ ಪದಾಧಿಕಾರಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ನಿರ್ದೇಶಿಸಿದೆ. 18 ಸದಸ್ಯರ ಪಂಚಾಯತ್ ಬೋರ್ಡ್‌ನಲ್ಲಿ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ಗೆ ತಲಾ ೪ರಂತೆ ಸದಸ್ಯರಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಲೀಗ್ ಆಗ್ರಹಿಸಿತ್ತು. ಆದರೆ ಆ ಹುದ್ದೆ ನೀಡಲು ಸಾಧ್ಯವಿಲ್ಲವೆಂದು, ಹಿಂದಿನ ಕಾಲದಲ್ಲಿ ನಡೆದುಕೊಂಡು ಬಂದ ರೀತಿಯಂತೆ ಉಪಾಧ್ಯಕ್ಷ ಹುದ್ದೆ ನೀಡುವುದಾಗಿಯೂ ಕಾಂಗ್ರೆಸ್ ತಿಳಿಸಿತ್ತು. ಆದರೆ ಉಪಾಧ್ಯಕ್ಷ ಸ್ಥಾನವು ಬೇಡವೆಂದು ಲೀಗ್ ತಿಳಿಸಿತ್ತು. ವಿವಾದ ಉಂಟಾದ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್‌ನ ಸದಸ್ಯನನ್ನು ಕಾಂಗ್ರೆಸ್ ಉಪಾಧ್ಯಕ್ಷ ಹುದ್ದೆಗೆ ನಿರ್ದೇಶಿಸಿದ್ದು, ಮುಸ್ಲಿಂಲೀಗ್‌ನ ಇತರ ಸದಸ್ಯರು ಹಾಗೂ ಕಾಂಗ್ರೆಸ್ ಮತ ನೀಡಿ ಆತನನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್ ಪಂಚಾಯತ್ ಸಮಿತಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಲೀಗ್ ಕಾರ್ಯಕರ್ತರು, ಯೂತ್ ಲೀಗ್ ಪಂಚಾಯತ್ ಸಮಿತಿ ಸದಸ್ಯರು ರಾಜಿ ಬೆದರಿಕೆಯೊಡ್ಡಿ ವಾಟ್ಸಪ್‌ನಲ್ಲಿ ಕಾಂಗ್ರೆಸ್ ವಿರುದ್ಧ ಸಂದೇಶಗಳನ್ನು ಹಾಕಿದ್ದರು. ಅದು ಈಗಲೂ ಮುಂದುವರಿಯುತ್ತಿದೆ. ಇದೇ ವೇಳೆ ಚುನಾವಣೆಗೆ ಸಂಬಂಧಿಸಿ ಆರ್ಥಿಕ ವ್ಯವಹಾರ ಆರೋಪಗಳು ಕೇಳಿ ಬರುತ್ತಿದೆ. ಚುನಾವಣೆಗೆ ಮುಂಚಿತ ಒಕ್ಕೂಟದ ಏಕೋಪನ ಸಮಿತಿ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಹಂಚಿಕೊಳ್ಳಲು ಒಪ್ಪಂದ ಮಾಡಿಕೊಳ್ಳ ಲಾಗಿದೆ ಎಂದೂ ಹೇಳಲಾಗಿತ್ತು. ವಿವಾದ ಮುಂದುವರಿದರೆ ಅದು ಪಂಚಾಯತ್‌ನಲ್ಲೂ, ಮಂಜೇಶ್ವರ ವಿಧಾನಸಭಾ ಮಂಡಲದಲ್ಲೂ ದೊಡ್ಡ ಸಮಸ್ಯೆಗಳಿಗೆ ಹೇತುವಾಗಲಿದೆ ಎಂದು ಎರಡೂ ಪಕ್ಷದ ಮುಖಂಡರು ನುಡಿಯುತ್ತಾರಾದರೂ ಇದನ್ನು ಪರಿಹರಿಸಲಿರುವ ಮಧ್ಯಪ್ರವೇಶ ಉಂಟಾಗುತ್ತಿಲ್ಲವೆಂದು ಆರೋಪವಿದೆ.

ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಮಾತ್ರವಲ್ಲ ರಾಜ್ಯದ ಇತರ ಭಾಗಗಳಲ್ಲೂ ಲೀಗ್‌ಗೆ ಬಹುಮತವಿರುವ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್‌ನ್ನು ಅವಗಣಿಸುವ ಘಟನೆಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸೂಚಿಸುತ್ತಾರೆ. ಮಂಜೇಶ್ವರ ವಿಧಾನಸಭಾ ಮಂಡಲದ ಹಲವು ಪಂಚಾಯತ್‌ಗಳಲ್ಲೂ ಈ ಚುನಾವಣೆಯಲ್ಲಿ ಕಾಂಗ್ರೆಸನ್ನು ಇಲ್ಲದಂತೆ ಮಾಡಿದ ಘಟನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಎತ್ತಿ ತೋರಿಸುತ್ತಾರೆ.  ಕಾಂಗ್ರೆಸ್ ಮುಖಂಡರು ಮುಸ್ಲಿಂಲೀಗ್ ನೊಂದಿಗೆ ತೋರಿದ ಉದಾರ ನೀತಿಯ ಫಲವಾಗಿ ಮಂಜೇಶ್ವರ ಬ್ಲೋಕ್, ಮಂಗಲ್ಪಾಡಿ ಪಂಚಾಯತ್ ಮೊದಲಾದ ಹಲವು ಕಡೆಗಳಲ್ಲಿ ಚುನಾವಣೆಗೆ ಮುಂಚಿತವಾಗಿಯೇ ಕಾಂಗ್ರೆಸ್ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು.

You cannot copy contents of this page