ಮಂಜೇಶ್ವರ: ದೇವರ ರಾಜ್ಯ ವೆಂದು ಹೆಸರು ಪಡೆದ ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ ಮತೀಯ ರಾಜ್ಯವನ್ನಾಗಿಸಲು ಶ್ರಮಿಸುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ ರಾಜಗೋಪಾಲನ್ ನುಡಿದರು. ಸಿಪಿಎಂ ನೇತಾರ, ರೈತ ಮುಖಂಡ ಬಿಎಂ ರಾಮಯ್ಯ ಶೆಟ್ಟಿಯವರ 23ನೇ ಸಂಸ್ಮರಣೆ ದಿನಾಚರಣೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಆಡಳಿತದ ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ಮತೀಯ ಅಲ್ಪಸಂಖ್ಯಾತರ ನಿವಾಸಗಳ ಮೇಲೆ ಬುಲ್ಡೋಸರ್ ಹತ್ತಿಸಿದಾಗ ಅದಕ್ಕೆದುರಾಗಿ ಹೋರಾಟ ನಡೆಸಿದ್ದು ಸಿಪಿಎಂ ಆಗಿದೆ. ಸಿಪಿಎಂನ ಪೋಲೀಟ್ ಬ್ಯೂರೋ ಸದಸ್ಯೆ ಬೃಂದಾ ಕಾರಾಟ್‌ರವರ ನೇತೃತ್ವದಲ್ಲಿ ಬುಲ್ಡೋಸರನ್ನು ತಡೆದು ನಿಲ್ಲಿಸಿ ನ್ಯಾಯಾಂಗದ ಮುಖಾಂತರ ಹೋರಾಟಕ್ಕೆ ನೇತೃತ್ವ ನೀಡಿದ್ದಾರೆ. ಈಗ ಬೆಂಗಳೂರು ಪಕೀರ್ ಕಾಲನಿ ಯಲ್ಲಿ ಗುಡಿಸಲುಗಳಲ್ಲಿ ಕಾಂಗ್ರೆಸ್ ಸರಕಾರ ಬುಲ್ಡೋಸರ್ ನೀತಿಯನ್ನು ಜ್ಯಾರಿಗೊಳಿಸಿದೆ. ಸಿಪಿಎಂ ಪಕ್ಷದ ಜನ ಪ್ರತಿನಿಧಿಗಳು ಕೇರಳ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿದ ನಂತರ ಅದು ದೊಡ್ಡ ಸುದ್ದಿಯಾಯಿತು ಎಂದು ಅವರು ನುಡಿದರು. ಕೇರಳದ ಪಂಚಾಯತ್ ಚುನಾವಣೆಯಲ್ಲಿ ಕೋಲೀಬಿ ಮೈತ್ರಿ ರೀತಿಯಲ್ಲಿ ಬೆಂಗಳೂರಿನ ಈ ವಿಷಯದಲ್ಲಿ ಕೂಡ ಕಾಣಬಹುದು ಎಂದು ಹೇಳಿದರು . ಕೆ. ಆರ್ ಜಯಾನಂದ ಅಧ್ಯಕ್ಷತೆ ವಹಿಸಿದರು. ಬೇಬಿ ಶೆಟ್ಟಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಚಿಪ್ಪಾರ್, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದವರನ್ನು ಸನ್ಮಾನಿಸಲಾಯಿತು. ಬಿ. ಎಂ ರಾಮಯ್ಯ ಶೆಟ್ಟಿಯವರ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆಯನ್ನು ಕಾಞಂಗಾಡ್ ಮುನಿಸಿಪಾಲಿಟಿ ಅಧ್ಯಕ್ಷ ವಿ ವಿ ರಮೇಶನ್ ಉದ್ಘಾಟಿಸಿದರು. ಕೆ ಆರ್ ಜಯಾನಂದ ಮಾತನಾಡಿದರು. ಬಿಎಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ, ಕೆ ಕಮಲಾಕ್ಷ ಸ್ವಾಗತಿಸಿದರು.







