ತಾಲೂಕು ಕಚೇರಿ ಬಳಿಯ ಲಾಟರಿ ಸ್ಟಾಲ್, ಫೋಟೋಸ್ಟಾಟ್ ಅಂಗಡಿಗೆ ಬೆಂಕಿ

ಕಾಸರಗೋಡು: ಕಾಸರಗೋಡು ತಾಲೂಕು ಕಚೇರಿ ಬಳಿ ಕಾರ್ಯವೆಸಗುತ್ತಿರುವ ಲಾಟರಿ  ಸ್ಟಾಲ್ ಮತ್ತು  ಪೋಟೋಸ್ಟಾಟ್ ಅಂಗಡಿಗೆ ಬೆಂಕಿ ತಗಲಿದೆ.   ನಿನ್ನೆ ರಾತ್ರಿ  ಸುಮಾರು 11.15 ರ ವೇಳೆ  ಘಟನೆ ನಡೆದಿದ್ದು,  ಇದನ್ನು ಗಮನಿಸಿದ ಊರವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಆಗಮಿಸಿ ಬೆಂಕಿ ನಂದಿಸಿದೆ.  ಬೆಂಕಿ ತಗಲಿದ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲವೆಂದು ಅಗ್ನಿಶಾಮಕದಳದವರು ತಿಳಿಸಿದ್ದಾರೆ. ಡಿ.ಕೆ.ಪಂಡಿತ್ ಎಂಬವರ ಹೆಸರಲ್ಲಿರುವ ಪ್ರಸ್ತುತ ಫೋಟೋಸ್ಟಾಟ್ ಅಂಗಡಿಯನ್ನು ಈಗ ಬೀರಂತಬೈಲು  ಕೋಟಿ ಹಿತ್ತಿಲಿನ ಮಹೇಶ್ ಪೂಜಾರಿ ಎಂಬವರು ನಡೆಸುತ್ತಿದ್ದಾರೆ. ಬೆಂಕಿ ಅನಾಹುತದ ಬಗ್ಗೆ ಅವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಫೋಟೋಸ್ಟಾಟ್ ಅಂಗಡಿಯ  ಫೋಟೋಸ್ಟಾಟ್ ಯಂತ್ರ, ಪ್ರತಿಗಳನ್ನು ತೆಗೆಯುವ ಯಂತ್ರ ಸೇರಿದಂತೆ ಅದರೊಳಗಿರುವ ಎಲ್ಲಾ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಸುಮಾರು 1 ಲಕ್ಷ ರೂ.ಗಿಂತಲೂ ಅಧಿಕ ನಷ್ಟ ಅಂದಾಜಿಸಲಾಗಿದೆ. ಬೆಂಕಿ ತಗಲಿದ ಲಾಟರಿ ಸ್ಟಾಲ್‌ನ ಮಾಲಕನ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ.

You cannot copy contents of this page