ಮಹಾರಾಜಾಸ್ ಕಾಲೇಜಿನಲ್ಲಿ ಅಂಗಡಿಮೊಗರು ನಿವಾಸಿ ವಿದ್ಯಾರ್ಥಿಗೆ ಇರಿತ: ಕೆಎಸ್‌ಯು ಕಾರ್ಯಕರ್ತ ಸೆರೆ
ಕೊಚ್ಚಿ: ಎರ್ನಾಕುಳಂನ ಮಹಾರಾಜಾಸ್ ಕಾಲೇಜು ವಿದ್ಯಾರ್ಥಿಯೂ, ಅಂಗಡಿಮೊಗರು ಬಳಿಯ ಪರ್ಲಾಡಂ ನಿವಾಸಿಯಾದ ಎಸ್‌ಎಫ್‌ಐ ಕಾರ್ಯಕರ್ತನಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್‌ಯು ಕಾರ್ಯಕರ್ತನನ್ನು ಸೆರೆ ಹಿಡಿಯಲಾಗಿದೆ. ಪರ್ಲಾಡಂ ನಿವಾಸಿ ಅಬ್ದುಲ್ ರಹಿಮಾನ್‌ರ ಪುತ್ರ ಅಬ್ದುಲ್ ನಾಸರ್‌ಗೆ ನಿನ್ನೆ ಮುಂಜಾನೆ ತಂಡವೊಂದು ಇರಿದು ಗಾಯಗೊಳಿಸಿತ್ತು. ಈ ಸಂಬಂಧ ಕಣ್ಣೂರು ನಿವಾಸಿಯೂ, ಎನ್ವಯೋನ್‌ಮೆಂಟಲ್ ಕೆಮೆಸ್ಟ್ರಿ ತೃತೀಯ ವರ್ಷ ವಿದ್ಯಾರ್ಥಿಯಾದ ಮುಹಮ್ಮದ್ ಇಜ್‌ಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎಂ.ಜಿ. ವಿಶ್ವವಿದ್ಯಾನಿಲಯದ ನಾಟಕೋತ್ಸವದಂಗವಾಗಿ ಕಾಲೇಜು ಕ್ಯಾಂಪಸ್‌ನೊಳಗೆ ನಾಟಕ ತರಬೇತಿ ನಡೆಯುತ್ತಿತ್ತು. ಇದರ ಹೊಣೆಗಾರಿಕೆಯನ್ನು ಅಬ್ದುಲ್ ನಾಸರ್ ವಹಿಸಿಕೊಂಡಿದ್ದರು. ತರಬೇತಿ ಮುಗಿದು ನಿನ್ನೆ ಮುಂಜಾನೆ ಅಲ್ಲಿಂದ ಮರಳುತ್ತಿದ್ದಾಗ ತಲುಪಿದ ಒಂದು ತಂಡ ಆಕ್ರಮಣ ನಡೆಸಿರುವುದಾಗಿ ದೂರಲಾಗಿದೆ. ಇರಿತದಿಂದ ಗಂಭೀರ ಗಾಯಗೊಂಡ ಅಬ್ದುಲ್ ನಾಸರ್‌ರನ್ನು ಕೊಚ್ಚಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎಸ್‌ಎಫ್‌ಐ ಕಾರ್ಯಕರ್ತನಿಗೆ ಆಕ್ರಮಣ ನಡೆಯುವುದರೊಂದಿಗೆ ಮಹಾರಾಜಾಸ್ ಕಾಲೇಜಿನಲ್ಲಿ ಮತ್ತೆ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ. ಕಾಲೇಜಿನ ಸಮೀಪದಲ್ಲೇ ಇರುವ ಹಾಸ್ಟೆಲನ್ನು ಅನಿರ್ಧಿಷ್ಟಾವಧಿಗೆ ಮುಚ್ಚುಗಡೆಗೊಳಿಸುವ ಬಗ್ಗೆ ಅಧಿಕಾರಿಗಳು ಆಲೋಚಿಸುತ್ತಿದ್ದಾರೆ.