ಮುಳ್ಳೇರಿಯ: ರಸ್ತೆಯಲ್ಲಿ ಚಿರತೆ ಬೆಕ್ಕೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವಾಹನ ಢಿಕ್ಕಿಹೊಡೆದು ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ಇಂದು ಮುಂಜಾನೆ ೨ ಗಂಟೆ ವೇಳೆಗೆ ಮುಳ್ಳೇರಿಯದಿಂದ ಆದೂರಿನತ್ತ ತೆರಳುವ ರಸ್ತೆಯಲ್ಲಿ ಚಿರತೆಬೆಕ್ಕಿನ (ಪುಲಿಪೂಚ) ಮರಿಯ ಮೃತದೇಹ ಪತ್ತೆಯಾಗಿದೆ. ತಾಯಿಯ ಜೊತೆ ರಸ್ತೆ ದಾಟುವಾಗ ಯಾವುದೋ ವಾಹನ ಢಿಕ್ಕಿ ಹೊಡೆದಿರಬೇಕೆಂದು ಶಂಕಿಸಲಾಗುತ್ತಿದೆ. ಮಾಹಿತಿ ತಿಳಿದು ಅಸಿಸ್ಟೆಂಟ್ ಫಾರೆಸ್ಟ್ ಕನ್ಸರ್ವೇಟರ್, ಆರ್‌ಆರ್‌ಪಿಯ ಸತ್ಯನ್ ನೇತೃತ್ವದ ತಂಡ ಸ್ಥಳಕ್ಕೆ ತಲುಪಿ ಕಳೇಬರವನ್ನು ಅರಣ್ಯ ಇಲಾಖೆಯ ಕಚೇರಿಗೆ ಸ್ಥಳಾಂತರಿಸಿದ್ದಾರೆ. ಇಂದು ಬೆಳಿಗ್ಗೆ ಮುಳ್ಳೇರಿಯ ವೆಟರ್ನರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇದರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







