ಎಡನೀರು: ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ನ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ದೈವದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳು ಹಾಗೂ ಹಣವನ್ನು ದೋಚಿದ್ದಾರೆ.
ಇದು ಮಾತ್ರವಲ್ಲದೆ ಮೂರು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನೂ ಕದ್ದು ಸಾಗಿಸಿದ್ದಾರೆ. ಜನವರಿ 6ರಂದು ಬೆಳಿಗ್ಗೆ 7 ಗಂಟೆ ಮತ್ತು ನಿನ್ನೆ ಬೆಳಿಗ್ಗೆ 7 ಗಂಟೆಯೊಳಗಿನ ಸಮಯದಲ್ಲಿ ಈ ಕಳವು ನಡೆದಿದೆ. 1,70,000 ರೂ. ಮೌಲ್ಯದ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳ್ಳಿ ಒಡವೆಗಳು ಹಾಗೂ ನಾಣ್ಯ, ಕರೆನ್ಸಿ ನೋಟುಗಳು ಸೇರಿದಂತೆ 3,360 ರೂ. ನಗದನ್ನು ಕಳವುಗೈಯ್ಯಲಾಗಿದೆ. ಕಳವುಗೈದ ಚಿನ್ನ ಮತ್ತು ಬೆಳ್ಳಿ ದೈವಕ್ಕೆ ತೊಡಿಸುವ ಆಭರಣಗಳಾಗಿವೆ. ಈ ಬಗ್ಗೆ ಪ್ರಸ್ತುತ ತರವಾಡಿನ ಸದಸ್ಯರಾದ ಬಿ. ಬಾಲಕೃಷ್ಣನ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ಎಸ್‌ಐಗಳಾದ ಅನೂಪ್ ಮತ್ತು ವಿಜಯನ್ ಮೇಲೋತ್ತ್‌ರ ನೇತೃತ್ವದ ಪೊಲೀಸರು ತರವಾಡಿಗೆ ಸಾಗಿ ತನಿಖೆ ನಡೆಸಿದರು. ಬೆರಳಚ್ಚು ತಜ್ಞರು ಆಗಮಿಸಿ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ. ತನಿಖೆಗೆ ಪೊಲೀಸ್ ಶ್ವಾನವನ್ನು ಬಳಸಲಾಯಿತು. ಕಳವುಗೈಯ್ಯಲ್ಪಟ್ಟ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ತರವಾಡಿನ ಪೂಜಾ ಕೊಠಡಿಯ ಪೆಟ್ಟಿಗೆಯಲ್ಲಿ ಇರಿಸಲಾ ಗಿತ್ತು. ಅದರಲ್ಲಿ ಎರಡು ಪವನ್‌ನ ಚಿನ್ನ ಮತ್ತು ಮುಕ್ಕಾಲು ಕಿಲೋ ಬೆಳ್ಳಿಯ ಆಭರಣಗಳು ಒಳಗೊಂಡಿತ್ತು. ಅದನ್ನೆಲ್ಲಾ ಕಳ್ಳರು ದೋಚಿದ್ದಾರೆ. ಈ ತರವಾಡಿನಲ್ಲಿ ಪ್ರತೀ ವರ್ಷ ಫೆಬ್ರವರಿಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿದೆ. ಈ ತರವಾಡಿನ ಸದಸ್ಯರು ನಿನ್ನೆ ಬೆಳಿಗ್ಗೆ ದೀಪ ಉರಿಸಲು ಬಂದಾಗಲಷ್ಟೇ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ತಕ್ಷಣ ಆ ಬಗ್ಗೆ ಪೊಲೀಸರಿಗೆ ದೂರು ನೀಡಲಾ ಯಿತು. ಈ ತರವಾಡಿನಲ್ಲಿ ಪಂಚಲೋಹ ವಿಗ್ರಹಗಳಿದ್ದು, ಅದನ್ನು ಕಳ್ಳರು ಸಾಗಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಂಗವಾಗಿ ಇತ್ತೀಚೆಗೆ ಜೈಲಿನಿಂದ ಹೊರಬಂದ ಕಳ್ಳರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







