ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಶೀಘ್ರದಲ್ಲೇ ನಡೆಯಲಿರುವಂತೆ ಅದಕ್ಕಿರುವ ಸಿದ್ಧತೆಗಳನ್ನು ಬಿಜೆಪಿ ಆರಂಭಿಸಿದೆ. ಇದರ ಪೂರ್ವಭಾವಿಯಾಗಿ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ ೧೧ರಂದು ಅಮಿತ್ ಶಾ ತಿರುವನಂತಪುರಕ್ಕೆ ಆಗಮಿಸುವರು. ಎಲ್ಲಾ ಮಂಡಲಗಳ ಮೇಲೂ ಗಮನ ಕೇಂದ್ರೀಕರಿಸುವುದರ ಬದಲು ಗೆಲುವು ಸಾಧ್ಯತೆಯುಳ್ಳ ಮಂಡಲಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಬಿಜೆಪಿ ಈ ಬಾರಿ ನಿರ್ಧರಿಸಿದೆ. ಈ ಬಾರಿ 40 ಮಂಡಲಗಳ ಮೇಲೆ ಬಿಜೆಪಿ ಮುಖ್ಯವಾಗಿ ಕಣ್ಣಿರಿಸಿರುವು ದಾಗಿ ಹೇಳಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಕ್ಕೆ ತಲುಪಿದ ಮಂಡಲಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಲಭಿಸಿದ ಮಂಡಲಗಳ ಮೇಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಚಟುವಟಿಕೆಯನ್ನು ಸಕ್ರಿಯಗೊಳಿಸಲಿದೆ. ಈ ಬಾರಿ ಕೇರಳದಲ್ಲಿ ಯಾರು ಆಡಳಿತ ನಡೆಸಬೇಕು ಎಂದು ತೀರ್ಮಾನಿಸುವ ಹಂತಕ್ಕೆ ತಲುಪುವುದು ಬಿಜೆಪಿಯ ಗುರಿಯಾಗಿದೆ. ಆದ್ದರಿಂದಲೇ ಕನಿಷ್ಠ ೪೦ ಸೀಟುಗಳ ಮೇಲೆ ಗಮನವಿರಿಸಿ ತನ್ನ ಚಟುವಟಿಕೆಯನ್ನು ಬಿಜೆಪಿ ನಡೆಸಲಿದೆ.
ಜನವರಿ ೧೧ರಂದು ತಿರುವನಂತಪುರಕ್ಕೆ ತಲುಪುವ ಅಮಿತ್ ಶಾ ಬಿಜೆಪಿ ಕೋರ್ ಕಮಿಟಿ ಸಭೆ ಹಾಗೂ ತಿರುವನಂತಪುರ ಕಾರ್ಪೋರೇಶನ್‌ನಲ್ಲಿ ಗೆಲುವುಸಾಧಿಸಿದ ಕೌನ್ಸಿಲರ್‌ಗಳ ಸಭೆಯಲ್ಲಿ ಭಾಗವಹಿಸುವರು. ಬಿಜೆಪಿರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್, ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್,ಶೋಭಾ ಸುರೇಂದ್ರನ್ ಮೊದಲಾದ ನೇತಾರರು ಸಭೆಯಲ್ಲಿ ಭಾಗವಹಿಸುವರು.ಅಮಿತ್ ಶಾ ಮರಳಿದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರಮೋದಿ ಕೂಡಾ ತಿರುವನಂತಪುರಕ್ಕೆ ಬರಲಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ತಿರುವನಂತಪುರ ಕಾರ್ಪೋರೇಶ ನ್‌ನಲ್ಲಿ ಬಿಜೆಪಿ ಈಬಾರಿ ಆಡಳಿತಕ್ಕೇರಿರುವುದರಿಂದ ರಾಜಧಾನಿಯ ಜನತೆಯ ಸಹಿತ ಪ್ರಧಾನಮಂತ್ರಿ ಅಭಿನಂದಿಸ ಲಿದ್ದಾರೆ. ಅಲ್ಲದೆ ರಾಜ್ಯಕ್ಕೆ ಪ್ರಧಾನ ಮಂತ್ರಿ ಬಹುದೊಡ್ಡ ಕೊಡುಗೆಗಳನ್ನು ಘೋಷಿಸಲಿ ದ್ದಾರೆಂದು ನಿರೀಕ್ಷಿಸಲಾಗಿದೆ. ಇದೇ ವೇಳೆಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ನೇತಾರರು ಸ್ಪರ್ಧಿಸಲಿದ್ದಾರೆಂದು ಹೇಳಲಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್,ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್, ಕೆ.ಸುರೇಂದ್ರನ್, ಶೋಭಾ ಸುರೇಂದ್ರನ್ ಸಹಿತ ಪ್ರಮುಖ ನೇತಾರರನ್ನು ಸ್ಪರ್ಧಾ ಕಣಕ್ಕಿಳಿಸಲು ಬಹುತೇಕ ನಿರ್ಧರಿಸಲಾಗಿದೆ. ನೇಮಂನಲ್ಲಿ ಸ್ಪರ್ಧಿಸುವುದಾಗಿ ರಾಜೀವ್ ಚಂದ್ರಶೇಖರ್ ಈಗಾಗಲೇ ಘೋಷಿಸಿದ್ದಾರೆ. ಕಳಕ್ಕೂಟಂನಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವುದಾಗಿ ವಿ.ಮುರಳೀಧರನ್ ತಿಳಿಸಿದ್ದಾರೆ.
ಕೆ. ಸುರೇಂದ್ರನ್‌ರ ಹೆಸರು ಪಾಲಕ್ಕಾಡ್‌ನಲ್ಲಿ ಸಕ್ರಿಯವಾಗಿ ಪರಿಗಣನೆಯಲ್ಲಿದೆ. ಶೋಭಾ ಸುರೇಂದ್ರನ್ ಕಾಯಂಕುಳಂನಲ್ಲಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗುತ್ತಿದೆ.







