ಕಾಸರಗೋಡು: ಅಂಬಲತ್ತರ ಪೊಲೀಸರು ಹಾಗೂ ಬೇಕಲ ಡಿವೈಎಸ್ಪಿ ನೇತೃತ್ವದ ಸ್ಕ್ವಾಡ್ ಸಂಯುಕ್ತವಾಗಿ ನಡೆಸಿದ ತಪಾಸಣೆಯಲ್ಲಿ 11.50 ಲಕ್ಷ ರೂಪಾಯಿ ಕಾಳಧನ ಸಹಿತ ಓರ್ವನನ್ನು ಬಂಧಿಸಲಾಗಿದೆ. ಅಂಬಲತ್ತರ ಕಲ್ಲಂದೋಳಿಯ ಅಬ್ಬಾಸ್ (40) ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪಾರಪ್ಪಳ್ಳಿಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಅಬ್ಬಾಸ್ ಕಾಳಧನ ಸಹಿತ ಸೆರೆಗೀಡಾಗಿದ್ದಾನೆ. ಹಣವನ್ನು ಕಟ್ಟುಗಳಾಗಿಸಿ ಸೀಟಿನಡಿಯಲ್ಲಿ ಬಚ್ಚಿಡಲಾಗಿತ್ತು. ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಲ್ಪ ಕಾಲದ ಬಳಿಕ ಕಾಸರಗೋಡು ಜಿಲ್ಲೆಯಲ್ಲಿ ಕಾಳಧನ ವ್ಯವಹಾರ ಮತ್ತೆ ತೀವ್ರಗೊಂಡಿರುವುದಾಗಿ ಪೊಲೀಸರಿಗೆ ಸೂಚನೆ ಲಭಿಸಿದೆ. ಚಿನ್ನದ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಳಧನ ಸಾಗಾಟ ವ್ಯಾಪಕಗೊಂಡಿರುವುದಾಗಿ ಪೊಲೀಸರಿಗೆ ಸೂಚನೆ ಲಭಿಸಿದೆ.






