ತಿರುವನಂತಪುರ: ಕಾಸರಗೋಡಿನ ಕನ್ನಡಿಗರು ಸೇರಿದಂತೆ ರಾಜ್ಯದಲ್ಲಿರುವ ಭಾಷಾ ಅಲ್ಪ ಸಂಖ್ಯಾತರ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡುವುದಿಲ್ಲ. ಭಾಷಾ ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಕೇರಳದ ಕನ್ನಡ ಮತ್ತು ತಮಿಳು ಭಾಷಿಗರ ಹಕ್ಕುಗಳನ್ನು ಸಂರಕ್ಷಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವ ಕೇರಳ ಸರಕಾರದ ಮಲಯಾಳಂ ಭಾಷಾ- ವಿಧೇಯಕ 2025 ವನ್ನು ವಿರೋಧಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳ ಸರಕಾರಕ್ಕೆ ಬರೆದ ಪತ್ರಕ್ಕೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಬಹುತ್ವ ಮತ್ತು ಜಾತ್ಯಾತೀತತೆಯ ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯಲು ಕೇರಳ ಸರಕಾರ ಬದ್ಧವಾಗಿದೆ. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸಲು ಈ ವಿಧೇಯಕ ವಿಶೇಷ ಪ್ರಾಧಾನ್ಯತೆ ನೀಡಿದೆ.
ಯಾವುದೇ ಭಾಷೆ ಹೇರಿಕೆಯನ್ನು ತಡೆಯುವ ಮತ್ತು ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವಂತ ನಿಬಂಧನೆಗಳು ವಿಧೇಯಕದಲ್ಲಿವೆ. ಗಡಿನಾಡಿನಲ್ಲಿ ಕನ್ನಡ ಮತ್ತು ತಮಿಳು ಭಾಷಿಗರು ತಮ್ಮ ಭಾಷೆಯನ್ನು ಅಧಿಕೃತವಾಗಿ ಸರಕಾರಿ ಕಚೇರಿಗಳು, ಇಲಾಖೆ ಮುಖ್ಯಸ್ಥರು ಮತ್ತು ಸ್ಥಳೀಯ ಕಚೇರಿಗಳ ವ್ಯವಹಾರಗಳಿಗೆ ಬಳಸಬಹುದಾಗಿದೆ. ಅವರಿಗೆ ಅದೇ ಭಾಷೆಯಲ್ಲೇ ಉತ್ತರ ನೀಡಲಾಗುವುದು. ಇನ್ನು ಮಲಯಾಳಂ ಮಾತೃಭಾಷೆ ಮಲಯಾಳಂ ಅಲ್ಲದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಶಾಲೆಯಲ್ಲಿ ಲಭ್ಯವಿರುವ ಭಾಷೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೊರರಾಜ್ಯಗಳು ಅಥವಾ ವಿದೇಶೀ ವಿದ್ಯಾರ್ಥಿಗಳು 9 ಮತ್ತು 10ನೇ ತರಗತಿ ಅಥವಾ ಹೈಯರ್ ಸೆಕೆಂಡರಿ ಹಂತಗಳಲ್ಲಿ ಮಲಯಾಳಂ ಪರೀಕ್ಷೆ ಎದುರಿಸುವುದು ಕಡ್ಡಾಯವಲ್ಲ. ಕೇರಳ ಭಾಷಾ ನೀತಿ 1963ರ ಅಧಿಕೃತ ಭಾಷೆಗಳ ಕಾಯ್ದೆಗೆ ಅನುಗುಣವಾಗಿದೆ ಮತ್ತು ಸಂವಿಧಾನದ 346 ಮತ್ತು 347ನೇ ಪರಿಚ್ಛೇಧ ಬದ್ದವಾಗಿದೆ ಎಂದು ಹೇಳಿರುವ ಪಿಣರಾಯಿ ವಿಜಯನ್, ಭಾರತದ ವೈವಿದ್ಯತೆಯನ್ನು ಸಂರಕ್ಷಿಸಬೇಕೇ ಹೊರತು, ನಿರ್ದಿಷ್ಟ ಭಾಷೆಯನ್ನೇ ಮಾತನಾಡಬೇಕೆಂಬ ಒತ್ತಡದ ಹೇಳಿಕೆ ಸರಿಯಲ್ಲ. ಕೇರಳದ ಮಾದರಿಯು ಎಲ್ಲರ ಭಾಗೀದಾರಿಕೆಗೆ ಹಾಗೂ ಪಾರದರ್ಶತೆ ಮೇಲೆ ನಿಂತಿದೆ. ಒಕ್ಕೂಟದ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಕೇರಳ ಸರಕಾರ ವಿರೋಧಿಸಲಿದೆ. ಮಾತ್ರವಲ್ಲದೆ ಪ್ರತೀಯೊಬ್ಬ ಪ್ರಜೆಯ ಭಾಷಾ ಸ್ವಾತಂತ್ರ್ಯವನ್ನು ಸಂರಕ್ಷಿಸಲು ಕೇರಳ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಕೇರಳದಲ್ಲಿ 1ನೆ ತರಗತಿಯಿಂದ 9ನೇ ತರಗತಿ ತನಕ ಭಾಷಾ ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆ ಜೊತೆಗೆ ಮಲಯಾಳವನ್ನೂ ಕಲಿಯಬೇಕೆಂಬ ವಿಧೇಯಕದಲ್ಲಿ ಹೇಳಲಾಗಿರುವ ನಿಬಂಧನೆ ಬಗ್ಗೆ ಮುಖ್ಯಮಂತ್ರಿ ಸರಿಯಾದ ಸ್ಪಷ್ಟೀಕರಣ ನೀಡಿಲ್ಲ. ಆದ್ದರಿಂದ ಇದು ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರು ಹೊಂದಿರುವ ಆತಂಕವನ್ನು ಇನ್ನೂ ದೂರಮಾಡಿಲ್ಲ.







