ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಈ ಕ್ರಮವನ್ನು ನಾಗರಿಕರು ತಡೆದಿದ್ದಾರೆ. ಶಾಸಕ ಎ.ಕೆ.ಎಂ. ಅಶ್ರಫ್‌ರ ನೇತೃತ್ವದಲ್ಲಿ ನಾಗರಿಕರು ಸ್ಥಳದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ. ಘಟನೆಗೆ ಸಂಬಂಧಿಸಿ ಶಾಸಕ ಸಹಿತ 60 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಿಗ್ಗೆ ಟೋಲ್ ಸಂಗ್ರಹ ಆರಂಭಿಸಿರುವುದನ್ನು ತಿಳಿದು ಶಾಸಕರ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ತಲುಪಿದ್ದಾರೆ. ಅನ್ಯಾಯ ರೀತಿಯಲ್ಲಿ ಟೋಲ್ ಸಂಗ್ರಹಕ್ಕೆ ಬಿಡಲಾರೆವೆಂದು ಚಳವಳಿನಿರತರು ತಿಳಿಸಿದ್ದಾರೆ. ಚಳವಳಿಯ ಹಿನ್ನೆಲೆಯಲ್ಲಿ ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಪೂರ್ಣವಾಗಿ ಮೊಟಕುಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳನ್ನು ಬೇರೆ ರೂಟ್‌ನಲ್ಲಿ ಕಳುಹಿಸಲಾಗುತ್ತಿದೆ.
ಘಟನೆಯ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳ ಸಹಿತ ೧೦೦ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಭದ್ರತೆ ಏರ್ಪಡಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಸಕ ಎಕೆಎಂ ಅಶ್ರಫ್, ಜಿಲ್ಲಾ ಪಂ. ಸದಸ್ಯ ಅಸೀಸ್ ಕಳತ್ತೂರು ಎಂಬಿವರ ಸಹಿತ 60 ಮಂದಿಯನ್ನು ಬಂಧಿಸಲಾಯಿತು. ಟೋಲ ಸಂಗ್ರಹಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಕ್ರಿಯಾ ಸಮಿತಿ ಪದಾಧಿಕಾರಿಗಳು ಇಂದು ಬೆಳಿಗ್ಗೆ ಚರ್ಚೆ ನಡೆಸಿದರು. ಚರ್ಚೆ ಪರಾಭವಗೊಳ್ಳುವು ದರೊಂದಿಗೆ ಚಳವಳಿ ನಿರತರು ರಸ್ತೆಗೆ ತಡೆಯೊಡ್ಡಿದ್ದಾರೆ. ಇಂದು ಬೆಳಿಗ್ಗೆಯಿಂದ ಕುಂಬಳೆಯಲ್ಲಿ ಟೋಲ್ ಸಂಗ್ರಹಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಇದಕ್ಕಾಗಿ ನೌಕರರನ್ನು ನೇಮಿಸಲಾಗಿದೆ. ಟೋಲ್ ಸಂಗ್ರಹಿಸಲಿರುವ ನಿರ್ಧಾರವನ್ನು ತಿಳಿದು ನೂರಾರು ಮಂದಿ ಸ್ಥಳಕ್ಕೆ ತಲುಪಿದ್ದರು.
ಕುಂಬಳೆಯಲ್ಲಿ ಟೋಲ್ ಸಂಗ್ರಹಿಸುವುದು ಅನ್ಯಾಯವಾಗಿದೆ. ಆದ್ದರಿಂದ ಅದನ್ನು ತಡೆಯಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ಮೇಲೆ ನ್ಯಾಯಾಲಯದ ತೀರ್ಪು ಇನ್ನಷ್ಟೇ ಬರಬೇಕಿದೆ. ನ್ಯಾಯಾಲಯದ ತೀರ್ಪು ಬರುವವರೆಗೆ ಟೋಲ್ ಸಂಗ್ರಹಿಸಕೂಡದೆಂದು ಜಿಲ್ಲಾಧಿಕಾರಿ ಭರವಸೆ ನೀಡಿರುವುದಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.






