ಕುಂಬಳೆ: ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವರ್ಷಾವಧಿ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭಗೊಳ್ಳಲಿದೆ. ನಾಳೆ ಬೆಳಿಗ್ಗೆ 8ರಿಂದ ಸೋಪಾನ ಸಂಗೀತ, 9.30ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, 10ಕ್ಕೆ ಶ್ರೀ ಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನ ಸಂತರ್ಪಣೆ, ಸಂಜೆ ೫ಕ್ಕೆ ನಡೆ ತೆರೆಯುವುದು, 5.15ರಿಂದ ಯಕ್ಷಗಾನ ಬಯಲಾಟ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ರಂಗಪೂಜೆ, ಉತ್ಸವ ಶ್ರೀ ಭೂತಬಲಿ ನಡೆಯಲಿರುವುದು. ವಾರ್ಷಿಕೋತ್ಸವದಂಗವಾಗಿ ಈ ತಿಂಗಳ 18ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಉತ್ಸವಕ್ಕಿರುವ ಸಿದ್ಧತೆಗಳೆಲ್ಲಾ ಪೂರ್ಣಗೊಂಡಿರುವುದಾಗಿ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಈ ತಿಂಗಳ 17ರಂದು ರಾತ್ರಿ ವಿಶೇಷ ಬೆಡಿ ಪ್ರದರ್ಶನ ನಡೆಯುವ ಮೈದಾನವನ್ನು ಶುಚಿಗೊಳಿಸಲಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಈ ಮೈದಾನದಲ್ಲಿ ನಿಲ್ಲಿಸಲಾಗುತ್ತಿದೆ. ಹೀಗೆ ನಿಲ್ಲಿಸಿದ್ದ ವಾಹನಗಳನ್ನು ಕ್ರೈನ್ ಬಳಸಿ ತೆರವುಗೊಳಿಸಲಾಗಿದೆ. ಪೊಲೀಸರ ಅನುಮತಿಯೊಂದಿಗೆ ಉತ್ಸವ ಸಮಿತಿಯ ನೇತೃತ್ವದಲ್ಲಿ ವಾಹನಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.







