ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹ ವಿರುದ್ಧ ಅನಿರ್ಧಿಷ್ಟಾವಧಿ ಚಳವಳಿ ಆರಂಭ

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹಿಸುವುದರ ವಿರುದ್ಧ  ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಚಳವಳಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಟೋಲ್ ಸಂಗ್ರಹ ಕೇಂದ್ರದ ಸಮೀಪ ಹೆದ್ದಾರಿ ಬದಿ ಚಪ್ಪರ ನಿರ್ಮಿಸಿ ಚಳವಳಿ ನಡೆಸಲಾಗುತ್ತಿದೆ.  ಇಂದು ಬೆಳಿಗ್ಗೆ  ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವುದನ್ನು ಕ್ರಿಯಾ ಸಮಿತಿ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ಪ್ರಶ್ನಿಸಿದ್ದು, ಈ ವೇಳೆ ವಾಗ್ವಾದ ಉಂಟಾಯಿತೆನ್ನಲಾಗಿದೆ. ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಚಳವಳಿಗೆ ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಸದಸ್ಯರಾದ ಅಸೀಸ್ ಕಳತ್ತೂರು, ಪೃಥ್ವೀರಾಜ್, ಬ್ಲೋಕ್ ಪಂ. ಸದಸ್ಯ ಅಶ್ರಫ್ ಕಾರ್ಳೆ, ಪಂಚಾಯತ್ ಜನಪ್ರತಿನಿಧಿಗಳು ಮೊದಲಾದವರು ಕ್ರಿಯಾಸಮಿತಿಯೊಂ ದಿಗೆ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದೇ ವೇಳೆ  ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಮಾಡುವ ಕ್ರಮವನ್ನು ವಿರೋಧಿಸಿ ನಿನ್ನೆ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಶಾಸಕ ಎಕೆಎಂ ಅಶ್ರಫ್ ಸೇರಿದಂತೆ ಕ್ರಿಯಾಸಮಿತಿಯ ೧೦೦ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾನೂನು ಪ್ರಕಾರವಾಗಿರುವ ಆಜ್ಞೆಯನ್ನು ಉಲ್ಲಂಘಿಸಿ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುವ ರೀತಿಯಲ್ಲಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಆರೋಪದಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಕೆಎಂ ಅಶ್ರಫ್‌ರ ಹೊರತಾಗಿ ಅಶ್ರಫ್ ಕಾರ್ಳೆ, ಅಸೀಸ್ ಕಳತ್ತೂರು, ಮೊಹಮ್ಮದ್ ಹಸ್ಸನ್ ಎ, ವಿ.ಪಿ. ಅಬ್ದುಲ್ ಖಾದರ್, ಸಿದ್ದೀಕ್ ದಂಡೆಗೋಳಿ, ಸಫ್ರಾಜ್, ಗೋಲ್ಡನ್ ಅಬ್ದು ರಹ್ಮಾನ್, ಝಡ್.ಎ. ಕಯ್ಯಾರ್, ಸವಾದ್ ಅಂಗಡಿಮೊಗರು ಸೇರಿದಂತೆ ಒಟ್ಟು ೧೦೦ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

You cannot copy contents of this page