ಶಬರಿಮಲೆ: ಕ್ಷೇತ್ರದಿಂದ ಚಿನ್ನ ಕಳವು ಪ್ರಕರಣ ತೀವ್ರಗತಿಯಲ್ಲಿ ತನಿಖೆ ಮುಂದುವರಿಯುತ್ತಿರುವ ಮಧ್ಯೆ ಕ್ಷೇತ್ರದ ಕಾಣಿಕೆ ಹುಂಡಿಯಿಂದ ವಿದೇಶಿ ಕರೆನ್ಸಿಗಳು ಹಾಗೂ ಚಿನ್ನವನ್ನು ಬಾಯಿಯೊಳಗಿಟ್ಟು ಸಾಗಿಸಿದ ಇಬ್ಬರು ದೇವಸ್ವಂ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಆಲಪ್ಪುಳ ಕೊಡುಪ್ಪುನ ನಿವಾಸಿ ಎಂ.ಜಿ. ಗೋಪಕುಮಾರ್ (51), ಕೈನಕ್ಕರಿ ನಾಲ್‌ಪುರೈಕ್ಕಲ್ ಸುನಿಲ್ ಜಿ. ನಾಯರ್ (51) ಎಂಬಿವರನ್ನು ದೇವಸ್ವಂ ವಿಜಿಲೆನ್ಸ್ ಬಂಧಿಸಿದೆ. ಇವರನ್ನು ಸನ್ನಿಧಾನ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಇವರಿಬ್ಬರು ತಾತ್ಕಾಲಿಕ ನೌಕರರಾಗಿದ್ದಾರೆ. ಕೆಲಸ ಮುಗಿಸಿ ಹೊರಗೆ ಹೋಗುವಾಗ ಇವರ ಬಾಯಿ ಉಬ್ಬಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಪರಿಶೀಲಿಸಿದಾಗ ಬಾಯಿಯೊಳಗೆ ವಿದೇಶಿ ಕರೆನ್ಸಿ ಹಾಗೂ ಚಿನ್ನ ಪತ್ತೆಯಾಗಿದೆ. ಗೋಪಕುಮಾರ್‌ನ ಬಾಯಿಯಿಂದ ಮಲೇಷ್ಯನ್ ಕರೆನ್ಸಿ ಹಾಗೂ ಸುನಿಲ್ ಕುಮಾರ್‌ನ ಬಾಯಿ ಯಲ್ಲಿ ಯುರೋ, ಕನೇಡಿಯನ್, ಯುಎಇ ಕರೆನ್ಸಿಗಳನ್ನು ಪತ್ತೆಹಚ್ಚಲಾಗಿದೆ. ಈ ರೀತಿಯಲ್ಲಿ ಇನ್ನಷ್ಟು ಹಣ ಇವರು ಸಾಗಿಸಿರುವರೇ ಎಂಬ ಬಗ್ಗೆ ಇವರು ವಾಸಿಸುವ ಕೊಠಡಿಗ ಳಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ಗೋಪ ಕುಮಾರ್‌ನ ಬ್ಯಾಗ್‌ನಿಂದ 500 ರೂ.ಗಳ 27 ನೋಟು, 100ರ 2 ನೋಟು, 20, 10ರ 4 ನೋಟುಗಳು ಸಹಿತ 13,820 ರೂ. ಹಾಗೂ 2 ಗ್ರಾಂನ ಚಿನ್ನದ ಪದಕ ಪತ್ತೆಹಚ್ಚಲಾಗಿದೆ. ಸುನಿಲ್ ಜಿ. ನಾಯರ್‌ನ ಬ್ಯಾಗ್‌ನಿಂದ 500 ರೂ.ಗಳ 50 ನೋಟು, 17 ವಿದೇಶಿ ಕರೆನ್ಸಿ ಸಹಿತ 25,೦೦೦ ರೂ. ಪತ್ತೆಹಚ್ಚಿರುವುದಾಗಿ ವಿಜಿಲೆನ್ಸ್ ಎಸ್‌ಪಿ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.






