ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರುದ್ಧ ಇಂದು ಬೆಳಿಗ್ಗೆ ಚಳವಳಿ ಪುನರಾರಂಭಿಸಿದ ಶಾಸಕ ಸಹಿತ ೧೫ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಳವಳಿಗಾಗಿ ನಿರ್ಮಿಸಿದ ಚಪ್ಪರವನ್ನು ಪೊಲೀಸರು ಮುರಿದು ತೆರವುಗೊಳಿಸಿದರು. ಶಾಸಕ ಎಕೆಎಂ ಅಶ್ರಫ್, ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ.ಸುಬೈರ್, ಕಾಂಗ್ರೆಸ್ ನೇತಾರ ಲಕ್ಷ್ಮಣ ಪ್ರಭು ಮೊದಲಾದವರನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ವೇಳೆ ಚಳವಳಿ ಮಧ್ಯೆ ನಿನ್ನೆ ರಾತ್ರಿ ನಡೆದ ಸಂಘರ್ಷಾವಸ್ಥೆಗೆ ಸಂಬಂಧಿಸಿ ೫೦೦ ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾನೂನು ಉಲ್ಲಂಘಿಸಿ ಗುಂಪು ಸೇರುವಿಕೆ, ಪೊಲೀಸರ ಆಜ್ಞೆ ಉಲ್ಲಂಘಿಸಿ ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಸುವಿಕೆ ಮೊದಲಾದ ಆರೋಪಗಳಂತೆ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ನಡೆಯುತ್ತಿದ್ದ ಚಳವಳಿಗೆ ಬೆಂಬಲ ಸೂಚಿಸಿ ಮುಸ್ಲಿಂ ಯೂತ್ ಲೀಗ್, ಡಿವೈಎಫ್‌ಐ ಕಾರ್ಯಕರ್ತರು ಮೆರವಣಿಗೆಯೊಂ ದಿಗೆ ಅಲ್ಲಿಗೆ ತಲುಪಿದಾಗ ಸಂಘರ್ಷ ಸ್ಥಿತಿ ಹುಟ್ಟಿಕೊಂಡಿತ್ತು. ರಾತ್ರಿ 8.30ರ ವೇಳೆ ಮೆರವಣಿಗೆ ಅಲ್ಲಿಗೆ ತಲುಪಿದೊಡನೆ ಚಳವಳಿ ನಿರತರು ಟೋಲ್ ಬೂತ್‌ನ ಕ್ಯಾಮರಾ ಹಾಗೂ ಗೇಟ್‌ನ್ನು ಮುರಿದು ಹಾಕಿದ್ದಾರೆ. ವಾಹನಗಳನ್ನು ತಡೆಯುವ ಟೋಲ್ ಬೂತ್‌ನ ಹ್ಯಾಂಡಲ್‌ಗಳನ್ನು ಕೂಡಾ ಹಾನಿಗೊಳಿಸ ಲಾಗಿದೆ. ಸ್ಕ್ಯಾನರ್‌ಗಳಿಗೆ ಕಪ್ಪು ಪ್ಲಾಸ್ಟಿಕ್ ಅಂಟಿಸ ಲಾಗಿದೆ. ಘಟನೆ ಸಂದರ್ಭದಲ್ಲಿ ಸುಮಾರು 2 ಸಾವಿರದಷ್ಟು ಮಂದಿ ಅಲ್ಲಿ ಜಮಾ ಯಿಸಿದ್ದರೆಂದು ಹೇಳಲಾಗುತ್ತಿದೆ. ಆದರೆ ಕೇವಲ 20ರಷ್ಟು ಪೊಲೀಸರು ಮಾತ್ರವೇ ಸ್ಥಳದಲ್ಲಿ ಇದ್ದರೆನ್ನಲಾಗಿದೆ. ವಾಹನಗಳಿಂದ ಟೋಲ್ ಸಂಗ್ರಹ ವಿರುದ್ಧ ಮೊನ್ನೆಯಿಂದ ಪ್ರತಿಭಟನೆ ಆರಂಭಗೊಂಡಿದೆ. ನಿನ್ನೆ ಅನಿರ್ದಿಷ್ಟಾವಧಿ ಚಳವಳಿ ಎರಡನೇ ದಿನಕ್ಕೆ ಕಾಲಿರಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಕಲೆಕ್ಟರೇಟ್‌ನಲ್ಲಿ ಶಾಸಕರ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ಜಿಲ್ಲಾಧಿಕಾರಿ ಉಪ ಸ್ಥಿತಿಯಲ್ಲಿ ನಡೆದಿದ್ದರೂ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. ಇದೇ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನ ವೇಳೆ ಚೀಫ್ ಸೆಕ್ರೆಟರಿ ಉಪಸ್ಥಿತಿಯಲ್ಲಿ ಈ ವಿವಾದವನ್ನು ಚರ್ಚೆ ನಡೆಸಬಹುದೆಂಬ ಒಪ್ಪಂದ ಮೇರೆಗೆ ಸಭೆ ಕೊನೆಗೊಂಡಿತ್ತು. ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಪರಿಗಣನೆಯಲ್ಲಿರುವ ಪ್ರಕರಣದಲ್ಲಿ ನಿರ್ಧಾರ ಉಂಟಾಗುವ ವರೆಗೆ ಟೋಲ್ ಸಂಗ್ರಹ ನಿಲುಗಡೆಗೊಳಿಸಬೇಕೆಂದು ಶಾಸಕ ಬೇಡಿಕೆ ಮುಂದಿರಿಸಿದ್ದು ಆದರೆ ಸಭೆ ಮೌನ ಪಾಲಿಸಿರುವುದಾಗಿ ಆರೋಪವುಂಟಾಗಿದೆ.






