ಮಂಜೇಶ್ವರ: ವಿದ್ಯುತ್ ತಂತಿ ಹಾಗೂ ಮರ ತುಂಡಾಗಿ ದೇಹದ ಮೇಲೆ ಬಿದ್ದು ಗಾಯಗೊಂಡು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ವಲಸೆ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರ ಪ್ರದೇಶ ಬಹ್‌ರೈಚ್, ಪಿಪ್ರಾ ಗೌರಾ ನಿವಾಸಿ ಗುಲಾಬ್ ಎಂಬವರ ಪುತ್ರ ವೀರೇಂದ್ರ (44) ಸಾವನ್ನಪ್ಪಿದ ದುರ್ದೈವಿ. ಇವರು ಉಪ್ಪಳ ರೈಲು ನಿಲ್ದಾಣ ಬಳಿ ಬಾಡಿಗೆ ಮನೆಯಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದರು. ಜನವರಿ 12ರಂದು ಮಧ್ಯಾಹ್ನ 2 ಗಂಟೆಗೆ ತೂಮಿನಾಡು ಲಕ್ಷಂವೀಡ್ ಕಾಲನಿಯ ಸಮೀಪದ ಮನೆಯಲ್ಲಿ ಕಾಂಕ್ರೀಟ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಪಕ್ಕದ ಮನೆಯ ಹಿತ್ತಿಲ ಮರವೊಂದು ಮುರಿದು ಅಲ್ಲೆ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಆ ತಂತಿ ಹಾಗೂ ಮರ ತುಂಡಾಗಿ ವೀರೇಂದ್ರರ ದೇಹದ ಮೇಲೆ ಬಿದ್ದಿತ್ತು. ಇದರಿಂದ ಗಾಯಗೊಂಡ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತರು ಪತ್ನಿ ರಂಭಾದೇವಿ, ಮಕ್ಕಳಾದ ಕುಂಜ್, ನೇಹಾ, ಖುಷ್ಬೂ, ರಾಹುಲ್, ಪಿಯೂಷ್, ಸಹೋದರರಾದ ಸುಖ್‌ರಾಮ್, ಬ್ರದ್ರಜ್, ಬಿಸ್ಲಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಬಳಿಕ ಊರಿಗೆ ಸಾಗಿಸಲಾಯಿತು.







