ಕಾಸರಗೋಡು: ಲೈಸನ್ಸ್ ಮಂಜೂರು ಮಾಡುವ ವಿಷಯದಲ್ಲಿ ಉಂಟಾಗುತ್ತಿರುವ ಕಾಲವಿಳಂಬ, ಪಟ್ಟಾ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಅನುಮತಿ ನೀಡದೆ ಇರುವ ಕಾರಣದಿಂದಾಗಿ ಕೆಂಪುಕಲ್ಲು ಉತ್ಪಾದನಾ ವಲಯ ಭಾರೀ ಸಂದಿಗ್ಧತೆಯನ್ನು ಎದುರಿಸುತ್ತಿದೆ ಎಂದೂ, ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದೆಂದು ಸರಕಾರ ಹೇಳುತ್ತಿದ್ದರೂ, ವಿವಿಧ ಇಲಾಖೆಗಳ ಹಠಮಾರಿತನ ನಿಲುವಿನಿಂದಾಗಿ ಇದಕ್ಕೆ ಈ ತನಕ ಪರಿಹಾರ ಕಂಡುಕೊಳ್ಳದೆ ಇರುವ ನಿಲುವನ್ನು ಪ್ರತಿಭಟಿಸಿ ಜನವರಿ 19ರಂದು ಕಾಸರಗೋಡು ಕಲೆಕ್ಟ್ರೇಟ್‌ಗೆ ಮಾರ್ಚ್ ನಡೆಸಲಾಗುವುದೆಂದು ಕೆಂಪುಕಲ್ಲು ಉತ್ಪಾದಕ ಮಾಲಕರ ಕಲ್ಯಾಣ ಸಂಘದ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳುವ ಮಾರ್ಚ್‌ನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರೆಂದು ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿದ ಸಂಘದ ರಾಜ್ಯ ಉಪಧ್ಯಕ್ಷ ಕೆ. ಸುಕುಮಾರನ್ ನಾಯರ್, ಜಿಲ್ಲಾ ಕಾರ್ಯದರ್ಶಿ ಹುಸೈನ್ ಬೇರ್ಕ, ಕೋಶಾಧಿಕಾರಿ ಎಂ. ವಿನೋದ್ ಕುಮಾರ್, ಎಂ.ವಿ. ಉಮ್ಮರ್ ತಿಳಿಸಿದ್ದಾರೆ. ನಾವು ಎದುರಿಸುತ್ತಿರುವ ಸಂಕಷ್ಟಗಳಿಗೆ ಸರಕಾರ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂದು ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಕೇಳಿಕೊಂಡಿದ್ದಾರೆ.







