ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವುಗೈದ ಪ್ರಕರಣದಲ್ಲಿ ಕಾಳಧನ ವ್ಯವಹಾರ ನಡೆದಿರುವುದಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇರಳ,ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಸ್ತುತ ಪ್ರಕರಣದ ಆರೋಪಿಗಳ ಮನೆ ಹಾಗೂ ಕಚೇರಿಗಳಿಗೆ ‘ಆಪರೇಶನ್ ಗೋಲ್ಡನ್ ಶಾಡೋ’ ಎಂಬ ಹೆಸರಲ್ಲಿ ಎನ್‌ಫೋ ರ್ಸ್‌ಮೆಂಟ್ ಡೈರೆಕ್ಟರೇಟ್(ಇ.ಡಿ) ಇಂದು ಬೆಳಿಗ್ಗಿನಿಂದ ಏಕ ಕಾಲದಲ್ಲಿ 21 ಕೇಂದ್ರಗಳಲ್ಲಿ ಇ.ಡಿ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ. ಈ ಪ್ರಕರಣದ ಒಂದನೇ ಆರೋಪಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ, ಇತರ ಆರೋಪಿಗಳಾದ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್, ಮಂಡಳಿಯ ಇನ್ನೋರ್ವ ಮಾಜಿ ಅಧ್ಯಕ್ಷ ಎನ್. ವಾಸು ಎಂಬಿವರ ಮನೆಗಳಿಗೆ ಇ.ಡಿ ದಾಳಿ ನಡೆಸಿ ತೀವ್ರ ತಪಾಸಣೆ ನಡೆಸುತ್ತಿದೆ. ಇದರ ಜೊತೆಗೆ ಇ.ಡಿಯ ಇನ್ನೊಂದು ತಂಡ ಇದೇ ಪ್ರಕರಣದ ಇತರ ಆರೋಪಿಗಳಾದ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯ ಮಾಲಕ ಪಂಕಜ್ ಭಂಡಾರಿಯ ಮನೆ ಮತ್ತು ಕಚೇರಿ, ಕರ್ನಾಟಕ ಬಳ್ಳಾರಿಯ ಚಿನ್ನದಂಗಡಿ ಮಾಲಕ ಗೋವರ್ಧನ್‌ನ ಮನೆಗೂ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ. ಹೀಗೆ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಒಟ್ಟು 21 ಕೇಂದ್ರಗಳಲ್ಲಿ ಇ.ಡಿ ದಾಳಿ ನಡೆಸುತ್ತಿದೆ. ದೇಶದ ವಿವಿಧ ರಾಜ್ಯಗಳ ಇ.ಡಿ ಕಚೇರಿಗಳ ಅಧಿಕಾರಿಗಳು ಈ ದಾಳಿಯಲ್ಲಿ ಒಳಗೊಂಡಿದ್ದಾರೆ. ತಪಾಸಣೆಯಲ್ಲಿ ಇ.ಡಿ ಹಲವು ಮಹತ್ತರದ ದಾಖಲುಪತ್ರಗಳು ಹಾಗೂ ಪುರಾವೆಗಳು ಲಭಿಸಿದೆಯೆಂದು ಹೇಳಲಾಗುತ್ತಿದೆ.
ಈ ಪ್ರಕರಣದಲ್ಲಿ ಇ.ಡಿ ಇಸಿಆರ್ ಪ್ರಕಾರ ದಾಖಲಿಸಿಕೊಂ ಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿ ಪ್ರಕರಣದ ಆರೋಪಿಗಳ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ. ಈ ದಾಳಿಯಲ್ಲಿ ಆರೋಪಿಗಳ ಆರ್ಥಿಕ ಹಾಗೂ ಕಾಳಧನ ವ್ಯವಹಾರ, ಆರೋಪಿಗಳು ನಡೆಸಿರುವ ಹಣ ಹಸ್ತಾಂತರ ಇತ್ಯಾದಿ ಮಾಹಿತಿಗಳನ್ನು ಇ.ಡಿ ಸಂಗ್ರಹಿಸುತ್ತಿದೆ. ಇದೇ ವೇಳೆ ತಿರುವನಂತಪುರದಲ್ಲಿರುವ ತಿರುವಿದಾಂಕೂರು ಮುಜರಾಯಿ ಕಚೇರಿಗೂ ಇ.ಡಿ ದಾಳಿ ನಡೆಸುತ್ತಿದೆ. ಕಾಳಧನ ಬಿಳುಪುಗೊಳಿಸುವಿಕೆ ತಡೆ ಕಾನೂನು(ಪಿಎಂಎಲ್‌ಎ) ಪ್ರಕಾರ ಈ ದಾಳಿ ನಡೆಸಲಾಗುತ್ತಿದೆ. ಆರೋಪಿಗಳು ಹೊಂದಿರುವ ಆಸ್ತಿಗಳ ಸಂಪೂರ್ಣ ಮಾಹಿತಿಗಳನ್ನು ಇ.ಡಿ ಇದರ ಜೊತೆಗೆ ಸಂಗ್ರಹಿಸುತ್ತಿದೆ.







