ಶಬರಿಮಲೆ ಚಿನ್ನ ಕಳವು: ವಿಧಾನಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ಮಧ್ಯೆ ವಾಗ್ವಾದ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಕಾವು ಇಂದು ಬೆಳಿಗ್ಗೆ ವಿಧಾನಸಭೆಯಲ್ಲೂ ಭುಗಿಲೆದ್ದಿತು. ಇದರ ಹೆಸರಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಭಾರೀ ವಾಗ್ವಾದ ಹಾಗೂ ಸದ್ದುಗದ್ದಲದ ವಾತಾವರಣ ನಿರ್ಮಾಣಗೊಂಡಿದ್ದು, ಇದರಿಂದ  ಸದನದ ಇಂದಿನ ಕಾರ್ಯಕಲಾಪಗಳನ್ನು ನಡೆಸಲು ಸಾಧ್ಯವಾಗದೆ  ವಿಧಾನಸಭಾ ಅಧ್ಯಕ್ಷರು ಅಲ್ಲಿಗೇ ಕೊನೆಗೊಳಿಸಿದರು. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಾಗಲೇ ಫಲಕ ಗಳನ್ನು ಹಿಡಿದುಕೊಂಡು ಸದನಕ್ಕೆ ಆಗಮಿಸಿದ  ವಿಪಕ್ಷಗಳ ಶಾಸಕರು ಶಬರಿಮಲೆ ಚಿನ್ನ ಕಳವು ವಿಷಯಕ್ಕೆ ಸಂಬಂಧಿಸಿ ಪ್ರತಿಭಟನೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಮುಜರಾಯಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಆಗ್ರಹಪಟ್ಟರು.ಆದರೆ ಯಾವುದೇ ಬೇಡಿಕೆಗಳನ್ನು ಸದನದ ಮುಂದೆ ಇರಿಸುವಾಗ ಅದಕ್ಕೆ ತುರ್ತಾಗಿ ಗೊತ್ತುವಳಿ ಮಂಡಿಸಬೇಕಾದ ಸಂಪ್ರದಾಯವಿದೆ. ಅದನ್ನು ಪಾಲಿಸದೆ ವಿರೋಧಪಕ್ಷ ನಾಯಕರು ಸಚಿವರ ರಾಜೀನಾಮೆ ಆಗ್ರಹಿಸುತ್ತಿರುವುದು ಅಪಹಾಸ್ಯಕರವಾಗಿದೆಯೆಂದು ಸಚಿವ ಎಂ.ಬಿ. ರಾಜೇಶ್ ಹೇಳಿದಾಗ  ಕೆರಳಿದ ವಿಪಕ್ಷೀಯರು ಸದನದಲ್ಲಿ ಭಾರೀ ಸದ್ದುಗದ್ದಲ ಎಬ್ಬಿಸಿದರು. ಅದನ್ನು ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದಾಗ ಅನ್ಯದಾರಿಯಿಲ್ಲದೆ ಸಭಾಧ್ಯಕ್ಷರು ಸದನದ ಇಂದಿನ ಕಾರ್ಯಕಲಾ ಪಗಳನ್ನು ರದ್ದುಪಡಿಸಿ ನಾಳೆಗೆ ಮುಂದೂಡಿದರು. ನಂತರ   ವಿಪಕ್ಷೀಯರು ಸದನದ ಹೊರಗೂ  ಪ್ರತಿಭಟನೆ ಮುಂದುವರಿಸಿದ್ದು ಇದೇ ವೇಳೆ ಆಡಳಿತ ಪಕ್ಷದವರು ಅದನ್ನು ವಿರೋಧಿಸಿ ಇನ್ನೊಂದೆಡೆ ಪ್ರತಿಭಟನೆ ನಡೆಸಿದರು.

You cannot copy contents of this page