ತಿರುವನಂತಪುರ: ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಸರಕಾರದ ಕೊನೆಯ ಬಜೆಟ್ನ್ನು ವಿಧಾನಸಭೆಯಲ್ಲಿ ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ನಾಳೆ ಬೆಳಿಗ್ಗೆ 9ಕ್ಕೆ ಮಂಡಿಸುವರು. ಇದು 2026-27ನೇ ಆರ್ಥಿಕ ವರ್ಷದ ಬಜೆಟ್ ಆಗಿದೆ.
ರಾಜ್ಯ ವಿಧಾನಸಭೆಗೆ ಎಪ್ರಿಲ್ನಲ್ಲಿ ಚುನಾವಣೆ ನಡೆಯಲಿರುವ ಸಾಧ್ಯತೆಯನ್ನು ಮುಂದಕ್ಕೆ ಕಂಡುಕೊಂಡು ಜನರನ್ನು ತಮ್ಮತ್ತ ಆಕರ್ಷಿಸುವಂತೆ ಮಾಡಲು ಹಲವು ಜನಕಲ್ಯಾಣ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ ಮಂಡನೆಯ ಮೊದಲೇ ಈ ಬಾರಿ ರಾಜ್ಯ ಬಜೆಟ್ ಮಂಡಿಸಲಾಗುತ್ತಿದೆ ಎಂಬ ವಿಶೇಷತೆಯೂ ಇದಕ್ಕಿದೆ. ಇದರಿಂದಾಗಿ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗುವ, ಕೇಂದ್ರ ಹಣಕಾಸು ಆಯೋಗದ ಅನುದಾನ ಹಾಗೂ ಕೇಂದ್ರ ಸರಕಾರದ ಇತರ ಯೋಜನೆಗಳ ಪಾಲನ್ನು ರಾಜ್ಯ ಸರಕಾರದ ಬಜೆಟ್ನಲ್ಲಿ ಒಳಪಡಿಸುವ ಅವಶ್ಯಕತೆಯೂ ತಲೆದೋರಲಿದೆ. ಕೇಂದ್ರ ಬಜೆಟ್ನ್ನು ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ನಲ್ಲಿ ಮಂಡಿಸಲಿದ್ದಾರೆ. ಅದಾದ ಬಳಿಕ ಅದಕ್ಕೆ ಹೊಂದಿಕೊಂಡು ರಾಜ್ಯ ಬಜೆಟ್ ನವೀಕರಿಸಬೇಕಾಗಿಬರಲಿದೆ.







