ಅಂತಾರಾಜ್ಯ ಮದ್ಯ ಸಾಗಾಟ ಸೂತ್ರಧಾರ ಬಂಧನ

ಕುಂಬಳೆ: ರಾಜ್ಯಕ್ಕೆ ಹೊರಗಿನಿಂದ ಮದ್ಯ ಸಾಗಾಟ ನಡೆಸುವ ದಂಧೆಯ ಸೂತ್ರಧಾರನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕರ್ನಾಟಕದ ಹೊನ್ನಾವರ ಬಜಾರ್ ರೋಡ್‌ನ ರಾಧಾಕೃಷ್ಣ ಎಸ್ ಕಮ್ಮತ್(61) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. 2023 ಜುಲೈ 9ರಂದು ಮಿನಿ ಲಾರಿಯಲ್ಲಿ  2484 ಲೀಟರ್ ಗೋವಾ ಮದ್ಯವನ್ನು ಕೇರಳಕ್ಕೆ ಸಾಗಿಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಕರ್ನಾಟಕ ಹಾಗೂ ಗೋವಾದಲ್ಲಿ ಮದ್ಯ ಸಾಗಿಸಿದ ಆರೋಪದಂತೆ ಕೇಸುಗಳಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಜೇಶ್ವರ ಎಕ್ಸೈಸ್ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ಗೋವಾ ಮದ್ಯ ವಶಪಡಿಸಿದ ಪ್ರಕರಣದಲ್ಲಿ ಈತ ವಾರಂಟ್ ಆರೋಪಿಯಾಗಿದ್ದಾನೆ.  ಈತನ ಪತ್ತೆಗಾಗಿ ಅಬಕಾರಿ ಅಧಿಕಾರಿಗಳು ತೀವ್ರ ನಿಗಾ ವಹಿಸುತ್ತಿದ್ದರು. ಈಮಧ್ಯೆ ಈತ ಹೊನ್ನಾವರ ಬಜಾರ್ ರಸ್ತೆಯಲ್ಲಿರುವ ಮನೆಗೆ ತಲುಪಿರುವುದಾಗಿ ಗುಪ್ತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದ ತಂಡ  ನಿನ್ನೆ ಬೆಳಿಗ್ಗೆ ಅಲ್ಲಿಗೆ ತಲುಪಿ  ರಾಧಾಕೃಷ್ಣ ಕಮ್ಮತ್‌ನನ್ನು ಬಂಧಿಸಿದೆ. ಬಳಿಕ ಆರೋಪಿಯನ್ನು ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಈ ವೇಳೆ ಆರೋಪಿಗೆ ಫೆ. 11ರ ವರೆಗೆ ರಿಮಾಂಡ್ ವಿಧಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಕೆ.ವಿ. ಮನಾಸ್, ಎಂ.ವಿ. ಜಿಜಿನ್, ಎಕ್ಸೈಸ್ ಸಿವಿಲ್ ಆಫೀಸರ್ ಎಂ.ಎಂ. ಅಖಿಲೇಶ್, ಚಾಲಕ ಪ್ರವೀಣ್ ಕುಮಾರ್ ಮೊದಲಾದವರಿದ್ದರು

You cannot copy contents of this page