ಕುಂಬಳೆ: ತಲಪಾಡಿಯಲ್ಲಿ ಟೋಲ್ ಬೂತ್ ಇರುವಾಗ ದೂರ ಮಿತಿಯನ್ನು ಉಲ್ಲಂಘಿಸಿ 22 ಕಿಲೋ ಮೀಟರ್‌ನೊಳಗೆ ಕುಂಬಳೆ ಆರಿಕ್ಕಾಡಿ ಯಲ್ಲಿ ಎರಡನೇ ಟೋಲ್ ಸ್ಥಾಪಿಸಲಾ ಗಿದ್ದು, ಅಲ್ಲಿಯೂ ಹಣ ಪಾವತಿಸಿದರೂ ವಾಹನಗಳನ್ನು ತಡೆದು ನಿಲ್ಲಿಸುವ ರಾಡ್ ಕಾರಿನ ಮೇಲೆ ಗುದ್ದಿರುವುದನ್ನು ಪ್ರಶ್ನಿಸಿದ ಪ್ರಯಾಣಿಕನನ್ನು ಕುಂಬಳೆ ಸಿಐಯ ನೇತೃತ್ವದಲ್ಲಿ ಕಾರಿನಿಂದ ಇಳಿಸಿ ಕುಟುಂಬದ ಮುಂದೆಯೇ ಅಪರಾಧಿ ಯಂತೆ ಕೊಂಡುಹೋಗಿರುವುದು ಖಂಡನೀಯವೆಂದು ಶಾಸಕ ಎಕೆಎಂ ಅಶ್ರಫ್ ನುಡಿದಿದ್ದಾರೆ. ಈ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಡಿಜಿಪಿಗೆ ಶಾಸಕರು ದೂರು ನೀಡಿದ್ದಾರೆ. ನ್ಯಾಯವಾದ ಪ್ರತಿಭಟನೆಗಳ ಜೊತೆ ನಿಲ್ಲಬೇಕಾದ ಪೊಲೀಸರು ಖಾಸಗಿ ಟೋಲ್ ಕಂಪೆನಿಗಾಗಿ ನಡೆಸುವ ಗೂಂಡಾ ಕೆಲಸಗಳನ್ನು ನಿಲ್ಲಿಸದಿದ್ದರೆ ಕುಂಬಳೆಯ ಪೊಲೀಸರು ಸಾರ್ವಜನಿಕರ ತೀವ್ರ ಪ್ರತಿಭಟನೆ ಎದುರಿಸಬೇಕಾಗಿ ಬರಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ನೀಡಿದ ತಂಡದಲ್ಲಿ ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರು, ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್ ಸೇರಿದ್ದರು.







