ಚೆನ್ನೈ: ಶಬರಿಮಲೆ ದೇಗುಲದಿಂದ ಚಿನ್ನ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಲೆಯಾಳ ಸಿನಿಮಾ ನಟ ಜಯರಾಮ್ರನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ಸಮಗ್ರ ವಿಚಾರಣೆ ಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಯೊಂದಿಗೆ ಜಯರಾಮ್ ನಿಕಟ ಸಂಬಂಧ ಹೊಂದಿದ್ದು ಆ ಬಗ್ಗೆ ಮಾಹಿತಿ ಸಂಗ್ರಹಿಸಲು ಎಸ್ಐಟಿ ಚೆನ್ನೈಯಲ್ಲಿರುವ ಜಯರಾಮ್ರ ನಿವಾಸಕ್ಕೆ ತೆರಳಿ ಅವರಿಂದ ಹೇಳಿಕೆ ದಾಖಲಿಸಿಕೊಂಡಿದೆ. ಹಲವು ಪೂಜೆಗಳಿಗಾಗಿ ಉಣ್ಣಿಕೃಷ್ಣನ್ ಪೋತ್ತಿ ತನ್ನ ಮನೆಗೆ ಬಂದಿದ್ದನು. ಅಲ್ಲದೆ ಪೋತ್ತಿ ಹೊಂದಿರುವ ಆರ್ಥಿಕ ವ್ಯವಹಾರ, ಆತ ನಡೆಸಿದ ವಂಚನೆ ಬಗ್ಗೆ ತನಗೇನೂ ತಿಳಿಯದು ಎಂದು ಎಸ್ಐಟಿಗೆ ನೀಡಿದ ಹೇಳಿಕೆಯಲ್ಲಿ ಜಯರಾಮ್ ಸ್ಪಷ್ಟಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಜಯರಾಮ್ರನ್ನು ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಸಾಕ್ಷಿದಾರನನ್ನಾಗಿಸಲು ಎಸ್ಐಟಿ ಮುಂದಾಗಿದೆ. ನಾನು ಅಯ್ಯಪ್ಪನ ಭಕ್ತನೆಂದು ತಿಳಿದ ಪೋತ್ತಿ ಶಬರಿಮಲೆ ದೇಗುಲದ ದ್ವಾರ ಪಾಲಕ ಮೂರ್ತಿಗಳ ಕವಚಗಳನ್ನು ನನ್ನ ಮನೆಗೆ ತಂದು ಪೂಜಿಸಬೇಕೆಂದು ಹೇಳಿದ್ದನು. ಅದರಂತೆ ನನ್ನ ಮನೆಯಲ್ಲಿ ಪೋತ್ತಿ ನೇತೃತ್ವದಲ್ಲಿ ಪೂಜೆ ನಡೆದಿತ್ತು. ಮಾತ್ರವಲ್ಲದೆ ಆ ಚಿನ್ನದ ಮೂರ್ತಿಗಳ ಕವಚಗಳನ್ನು ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಗೆ ಸಾಗಿಸಿ ಅಲ್ಲಿ ಪೂಜೆ ನಡೆಸುವ ವೇಳೆ ಪೋತ್ತಿ ನನಗೆ ಆಹ್ವಾನ ನೀಡಿದ್ದನು. ಅದರಂತೆ ಪೂಜೆಯಲ್ಲಿ ನಾನು ಕೂಡಾ ಪಾಲ್ಗೊಂಡಿದ್ದೆ. ಆ ಮೂರ್ತಿಗಳ ಕವಚಗಳನ್ನು ಕೋಟ್ಟಯಂ ಇಳಂಪಳ್ಳಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಸಾಗಿಸುವ ಶೋಭಾಯಾತ್ರೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ದೇವರು ಹಾಗೂ ಪೂಜೆಯೊಂದಿಗೆ ಹೊಂದಿರುವ ವಿಶ್ವಾಸದ ಹೊರತಾಗಿ ಇತರ ವಿವಿಧ ವ್ಯವಹಾರಗಳೊಂದಿಗೆ ನಾನ್ಯಾವುದೇ ರೀತಿಯ ನಂಟು ಹೊಂದಿಲ್ಲವೆಂದು ಜಯರಾಮ್ ಸ್ಪಷ್ಟಪಡಿಸಿದ್ದಾರೆ. 2019 ಜೂನ್ನಲ್ಲಿ ಇದೆಲ್ಲಾ ನಡೆದಿದೆ. ಶಬರಿಮಲೆ ದೇಗುಲದ ಅರ್ಚಕನೆಂಬ ನೆಲೆಯಲ್ಲಿ ಮಕರಜ್ಯೋತಿ ದಿನದಂದು ನಾನು ಆತನನ್ನು ಮೊದಲು ಪರಿಚಯಗೊಂಡಿದ್ದೆ. ಅನಂತರ ಪೋತ್ತಿ ಹಲವು ಬಾರಿ ಚೆನ್ನೈಯಲ್ಲಿರುವ ತನ್ನ ಮನೆಗೆ ಬಂದಿದ್ದನೆಂದು ಜಯರಾಂ ತಿಳಿಸಿದ್ದಾರೆನ್ನಲಾಗಿದೆ.






