ಕುಖ್ಯಾತ ಕಳ್ಳ ಕರ್ನಾಟಕ ನಿವಾಸಿ ಸೆರೆ
ಮಲಪ್ಪುರಂ: ಕೊಂಡೋಟಿ ಬಸ್ ನಿಲ್ದಾಣ ಪರಿಸರದ ಮೊಬೈಲ್ ಅಂಗಡಿ ಮುರಿದು ನಾಲ್ಕು ಲಕ್ಷದಷ್ಟು ರೂಪಾಯಿ ಮೌಲ್ಯದ ಮೊಬೈಲ್ಗಳನ್ನು ಕಳವುಗೈದ ಪ್ರಕರಣದಲ್ಲಿ ಕರ್ನಾಟಕ ನಿವಾಸಿಗಳು ಸೆರೆಯಾಗಿದ್ದಾರೆ. ಕರ್ನಾಟಕ ಚಿಕ್ಕಬಳ್ಳಾಪುರ ನಿವಾಸಿ ಹರೀಶ (೨೩) ಕಳವುಗೈದ ಮೊಬೈಲ್ ಮಾರಾಟ ಮಾಡಲು ಸಹಾಯ ಮಾಡಿದ ಕರ್ನಾಟಕದ ಹೋಂಗಾರ್ಡ್ ಮಡಿಕೇರಿ ಕೈಕೇರಿ ಗಾಂಧಿನಗರ ನಿವಾಸಿ ಮೋಹನ್ ಕುಮಾರ್ (೨೭) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕಳೆದ ತಿಂಗಳ ೨೯ರಂದು ರಾತ್ರಿ ಅಂಗಡಿ ಮುರಿದು ಮೊಬೈಲ್ಗಳನ್ನು ತೆಗೆದುಕೊಂಡು ಬೆಂಗಳೂರಿಗೆ ತಲುಪಿದ ಹರೀಶ್ ಹೋಂಗಾರ್ಡ್ನ ಸಹಾಯದಿಂದ ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡಿದ್ದಾನೆ. ಅಧಿಕ ಬೆಲೆಯ ಮೊಬೈಲ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಶಂಕೆ ತೋರಿ ತಪಾಸಣೆ ನಡೆಸಿದಾಗ ಕಳವು ಬಗ್ಗೆ ತಿಳಿದುಬಂದಿದೆ. ಬಳಿಕ ಗಡಿಪ್ರದೇಶವಾದ ಬಾಗೇಪಳ್ಳಿಯಿಂದ ಹರೀಶನನ್ನು ಪ್ರತ್ಯೇಕ ತನಿಖಾ ತಂಡ ಸೆರೆಹಿಡಿದಿದೆ. ಈತ ಪಯನ್ನೂರಿನಿಂದಲೂ ಕಳವು ನಡೆಸಿದ ಬಗ್ಗೆಯೂ ತಿಳಿದುಬಂದಿದೆ. ಇದಲ್ಲದೆ ಇತರ ೧೦ ಕಳವು ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದು, ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದನು.