ಆಡು ವ್ಯಾಪಾರಿಯನ್ನು ಆಕ್ರಮಿಸಿ ಪಿಕಪ್, ಫೋನ್ ಅಪಹರಿಸಿದ ಪ್ರಕರಣ: ವಿದೇಶಕ್ಕೆ ಪರಾರಿಯಾದ ಆರೋಪಿ ಬಂಧನ
ಕುಂಬಳೆ: ಆಡು ವ್ಯಾಪಾರಿಯನ್ನು ಆಕ್ರಮಿಸಿ ಪಿಕಪ್ ವಾಹನ ಹಾಗೂ ಮೊಬೈಲ್ ಫೋನ್ ಅಪಹರಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಪೈವಳಿಕೆ ಪಾಕ ಅಲಾಮಿಲ್ಲತ್ತ್ ಕೋಟೇರ್ಜ್ನ ಅಬ್ದುಲ್ ರಹ್ಮಾನ್ ಯಾನೆ ಪಾಪು ರಹೀಂ (೪೦) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ.
ಪ್ರಕರಣದಲ್ಲಿ ಆರೋಪಿ ಯಾಗುವುದರೊಂದಿಗೆ ಮಸ್ಕತ್ಗೆ ಪರಾರಿಯಾದ ಈತ ಮರಳಿ ಬರುತ್ತಿದ್ದಾಗ ನೆಡುಂಬಾಶೇರಿ ವಿಮಾನ ನಿಲ್ದಾಣದಿಂದ ಸೆರೆಗೀಡಾಗಿದ್ದಾನೆ.
೨೦೨೩ ಜೂನ್ ೨೪ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ರಾಜಸ್ಥಾನ ನಿವಾಸಿಯೂ ಆಡು ವ್ಯಾಪಾರಿಯಾದ ಕಾಯರಾಂ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಚೆನ್ನೈಯಲ್ಲಿ ಆಡು ಮಾರಾಟ ನಡೆಸಿ ಕಾಯರಾಂ ಪಿಕಪ್ನಲ್ಲಿ ಊರಿಗೆ ಮರಳುತ್ತಿದ್ದರು. ಈ ವೇಳೆ ಕೊಬ್ಬರಿ ಕೊಂಡೊಯ್ಯಲಿ ದೆಯೆಂದು ತಿಳಿಸಿ ಕಾಯರಾಂರನ್ನು ಪೈವಳಿಕೆ ಬಳಿಯ ಚೇವಾರಿಗೆ ಬರಮಾಡಲಾಗಿತ್ತು. ಆಡು ಮಾರಾಟ ನಡೆಸಿದ ವತಿಯಿಂದ ಲಭಿಸಿದ ಹಣ ಕಾಯರಾಂರ ಕೈಯಲ್ಲಿದ್ದು ಅದನ್ನು ಲಪಟಾಯಿಸುವುದೇ ಅಕ್ರಮಿ ತಂಡದ ಉದ್ದೇಶವಾಗಿತ್ತು. ವಾಹನದೊಂದಿಗೆ ಚೇವಾರಿಗೆ ತಲುಪಿದ ಕಾಯರಾಂರಿಗೆ ನಾಲ್ಕು ಮಂದಿಯ ತಂಡ ಹಲ್ಲೆಗೈದು ಹಣ ಕೊಡುವಂತೆ ಒತ್ತಾಯಿಸಿದೆ. ಹಣವಿಲ್ಲವೆಂದು ತಿಳಿಸಿದಾಗ ಗೂಗಲ್ ಪೇ ಮೂಲಕ ಹಣ ಹಸ್ತಾಂತರಿಸುವಂತೆ ತಂಡ ಒತ್ತಾಯಿಸಿದೆ. ಅದಕ್ಕೆ ಕಾಯರಾಂ ಸಿದ್ದರಾಗದಿದ್ದಾಗ ತಂಡ ಹಲ್ಲೆಗೈದು ಫೋನ್ ಹಾಗೂ ಪಿಕಪ್ ವಾಹನವನ್ನು ಅಪಹರಿಸಿ ತಂಡ ಪರಾರಿ ಯಾಗಿತ್ತು. ಈ ಪ್ರಕರಣದಲ್ಲಿ ಆರೋ ಪಿಗಳಾದ ಬಂಬ್ರಾಣ ದಿಡುಮೆಯ ಫಾರೂಕ್, ಮಣ್ಣಂಗುಳಿಯ ಅಬ್ದುಲ್ ಅಸೀಸ್ ಎಂಬಿವರನ್ನು ಈ ಹಿಂದೆ ಸೆರೆ ಹಿಡಿಯಲಾಗಿತ್ತು. ಇದೇ ವೇಳೆ ಅಬ್ದುಲ್ ರಹ್ಮಾನ್ ಹಾಗೂ ಚೇವಾರಿನ ಕಲಂದರ್ ಶಾಹುಲ್ ಹಮೀದ್ ವಿದೇಶಕ್ಕೆ ಪರಾರಿಯಾಗಿರುವುದಾಗಿ ಸೂಚನೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಲುಕೌಟ್ ನೋಟೀಸು ಜ್ಯಾರಿಗೊಳಿಸಲಾಗಿತ್ತು. ಇದೇ ವೇಳೆ ವಿದೇಶದಿಂದ ಅಬ್ದುಲ್ ರಹ್ಮಾನ್ ಆಗಮಿಸಿದ್ದು, ಈ ವೇಳೆ ನೆಡುಂಬಾಶೇರಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ನಿಲ್ಲಿಸಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಕುಂಬಳೆ ಅಡಿಶನಲ್ ಎಸ್.ಐ. ವಿ. ರಾಮಕೃಷ್ಣನ್ ನೇತೃತ್ವದ ಪೊಲೀಸರು ನೆಡುಂಬಾಶೇರಿಗೆ ತೆರಳಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.